

ಹುಣಸೂರು: ಮುಂಬರುವ ಜಿಲಾ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ಮತದಾರರಿಗೆ ಅರಿವು ಮೂಡಿಸಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಬೇಕೆಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ಸಲಹೆ ನೀಡಿದರು.
ನಗರದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಶನಿವಾರ ಪಕ್ಷದ ವಿವಿಧ ಬ್ಲಾಕ್‌ಗಳಿಗೆ ನಾಮಕರಣಗೊಂಡ ಸದಸ್ಯರಿಗೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಜೂನ್ ತಿಂಗಳಿನಲ್ಲಿ ಜಿಪಂ ಮತ್ತು ತಾಪಂ ಚುನಾವಣೆಗಳು ನಡೆಯಲಿದ್ದು, ಪಕ್ಷದ ಕಾರ್ಯಕರ್ತರು, ಮುಖಂಡರು ಸರ್ಕಾರದ ಎರಡು ವರ್ಷಗಳ ಸಾಧನೆಯನ್ನು ಜನರಿಗೆ ತಿಳಿಸುವ ಕಾರ್ಯ ಮಾಡಬೇಕು. ಮುಖ್ಯವಾಗಿ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಜಾರಿ ಮತ್ತು ಅದರಿಂದಾಗುತ್ತಿರುವ ಅನುಕೂಲಗಳನ್ನು ಜನರಿಗೆ ತಿಳಿಸಬೇಕು. ಕೆಪಿಸಿಸಿ ನಿರ್ದೇಶನದಂತೆ ಎಲ್ಲ ತಾಲೂಕುಗಳ ಬ್ಲಾಕ್ ಹಾಗೂ ವಿವಿಧ ಘಟಕಗಳನ್ನು ಮರು ರಚಿಸಲಾಗುವುದು. ಪಕ್ಷ ನಿಷ್ಠೆ, ಜನರಿಗೆ ಸ್ಪಂದಿಸುವ ಕಾರ್ಯಕರ್ತರೇ ಪಕ್ಷದ ಆಸ್ತಿ. ಹುಣಸೂರು ಜಾತಿ, ಧರ್ಮವನ್ನು ಮೀರಿದ ಕ್ಷೇತ್ರವಾಗಿದ್ದು ಇಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಬೇಕೆಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿ, ಹುಣಸೂರು ತಾಲೂಕಿನಲ್ಲಿ ಪಕ್ಷದಿಂದ ಅಧಿಕಾರ ಅನುಭವಿಸಿ ಪಕ್ಷಕ್ಕೆ ದ್ರೋಹ ಮಾಡಿರುವವರೇ ಹೆಚ್ಚಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಬರಲಿದ್ದು, ಚುನಾವಣೆ ಎದುರಿಸಲು ಸಜ್ಜಾಗಬೇಕು ಎಂದರು.
ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿದರು. ತಾಲೂಕು ಉಸ್ತುವಾರಿ ರಾಮಪ್ಪ, ಬ್ಲಾಕ್ ಅಧ್ಯಕ್ಷ ನಾರಾಯಣ್, ಪ್ರೇಮಕುಮಾರ್, ಕಾರ್ಯಾಧ್ಯಕ್ಷ ಪುಟ್ಟರಾಜು, ಮುಖಂಡರಾದ ಹಂದನಹಳ್ಳಿ ಸೋಮಶೇಖರ್, ಜಯರಾಮ್ ಅಣ್ಣಯ್ಯನಾಯಕ, ಸುರೇಶ್, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.