

ಚಿಕ್ಕಬಳ್ಳಾಪುರ: ಹಲವು ತಿಂಗಳುಗಳಿಂದಲೂ ಖಾಲಿ ಉಳಿದಿರುವ ನಗರಸಭೆ, ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಪಡಿಸಿ ಸರ್ಕಾರ ಗುರುವಾರ ಅಧಿಸೂಚನೆ ಹೊರಡಿಸಿದ್ದು, ಚಟುವಟಿಕೆಗಳು ಗರಿಗೆದರಿವೆ.
ಚಿಕ್ಕಬಳ್ಳಾಪುರ, ಗೌರಿಬಿದನೂರು, ಚಿಂತಾಮಣಿ, ಶಿಡ್ಲಘಟ್ಟ ನಗರಸಭೆ ಹಾಗೂ ಬಾಗೇಪಲ್ಲಿ ಪುರಸಭೆಗೆಮೀಸಲಾತಿ ವಿವಾದದಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ನಡೆದಿರಲಿಲ್ಲ.
ಮೀಸಲು: ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ(ಬಿಸಿಎ), ಚಿಂತಾಮಣಿ ನಗರಸಭೆ ಪರಿಶಿಷ್ಟ ಜಾತಿ (ಮಹಿಳೆ) ಹಾಗೂ ಹಿಂದುಳಿದ ವರ್ಗ ಬಿ(ಮಹಿಳೆ), ಗೌರಿಬಿದನೂರು ನಗರಸಭೆ ಸಾಮಾನ್ಯ (ಮಹಿಳೆ) ಹಾಗೂ ಪರಿಶಿಷ್ಟ ಜಾತಿ (ಮಹಿಳೆ), ಶಿಡ್ಲಘಟ್ಟ ನಗರಸಭೆ ಪರಿಶಿಷ್ಟ ಜಾತಿ ಹಾಗೂ ಸಾಮಾನ, ಬಾಗೇಪಲ್ಲಿ ಪುರಸಭೆ ಹಿಂದುಳಿದ ವರ್ಗ ಎ(ಮಹಿಳೆ) ಹಾಗೂ ಸಾಮಾನ್ಯ ಎಂದು ಮೀಸಲು ನಿಗದಿಯಾಗಿದೆ.
ಲೆಕ್ಕಾಚಾರ ಉಲ್ಟಾ ಪಲ್ಟಾ: ಹಿಂದಿನ ಮೀಸಲಾತಿ ಆಧಾರದಲ್ಲಿ ಚಿಕ್ಕಬಳ್ಳಾಪುರ ನಗರಸಭೆ ಗಾದಿ ಏರಲು ತುದಿಗಾಲಲ್ಲಿ ನಿಂತಿದ್ದ ಆಕಾಂಕ್ಷಿಗಳ ಲೆಕ್ಕಾಚಾರ ಉಲ್ಟಾ ಆಗಿದೆ. ಈ ಮೊದಲು ಇಲ್ಲಿನ ನಗರಸಭೆಗೆ ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ ಮತ್ತು ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮೀಸಲಾತಿಗೆ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ 16 ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್‌ನ ಮೂಲಕ ಅಧ್ಯಕ್ಷರಾಗಲು ಮೀನಾಕ್ಷಿ ಮಿಲ್ಟನ್ ವೆಂಕಟೇಶ್ (30ನೇ ವಾರ್ಡ್), ಕಣಿತಹಳ್ಳಿ ವೆಂಕಟೇಶ್ (29ನೇ ವಾರ್ಡ್), ಸತೀಶ್ (7ನೇ ವಾರ್ಡ್) ಕಸರತ್ತು ನಡೆಸಿದ್ದರು.
ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ನಿರ್ಮಲಾ ಪ್ರಭು (13 ನೇ ವಾರ್ಡ್), ಕೈ ಮತ್ತು ದಳ ನಡುವೆ ಮೈತ್ರಿಯಾದರೆ ಜೆಡಿಎಸ್‌ನ ಆರ್.ಮಟಮಪ್ಪ (9ನೇ ವಾರ್ಡ್), ವೀಣಾ ರಾಮುಗೆ (25ನೇ ವಾರ್ಡ್) ದಕ್ಕುವ ಮಾತು ಕೇಳಿ ಬಂದಿದ್ದವು, ಆದರೀಗ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ ಮೀಸಲಾತಿ ನಿಗದಿಯಾಗಿದ್ದು ಆಕಾಂಕ್ಷಿಗಳ ಕನಸು ನುಚ್ಚುನೂರಾಗಿದೆ.
ಗಾದಿ ಏರಲು ಕಸರತ್ತು: 31 ಸದಸ್ಯರ ಬಲದ ನಗರಸಭೆಯಲ್ಲಿ ಕಾಂಗ್ರೆಸ್ 16, ಜೆಡಿಎಸ್ 2, ಬಿಜೆಪಿ 9, ಪಕ್ಷೇತರರು 4 ಮಂದಿ ಇದ್ದಾರೆ. ಪ್ರಸ್ತುತ ಆನಂದ್ ರೆಡ್ಡಿ, ಅಂಬರೀಷ್ ಪ್ರಬಲ ಆಕಾಂಕ್ಷಿಯಾಗಿದ್ದು ಸುಬ್ರಹ್ಮಣ್ಯಚಾರಿ, ನರಸಿಂಹಮೂರ್ತಿ, ನಿರ್ಮಲಾ ಪ್ರಭು ಹೆಸರು ಕೇಳಿ ಬರುತ್ತಿದೆ. ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಒಡೆದು ಸಚಿವ ಡಾ ಕೆ.ಸುಧಾಕರ್ ಹಿಡಿತ ಸಾಧಿಸುವ ತಂತ್ರಗಾರಿಕೆ ಹೆಣೆದಿದ್ದಾರೆ. ಹಾಗೆಯೇ ಪಕ್ಷೇತರ ಸದಸ್ಯ ಆನಂದ್‌ರೆಡ್ಡಿ ಬಿಜೆಪಿ ಮತ್ತು ಮೈತ್ರಿ ಪಕ್ಷದ ಬೆಂಬಲ ಪಡೆದು ಗಾದಿಗೇರಲು ಕಸರತ್ತು ನಡೆಸುತ್ತಿದ್ದಾರೆ.