ಮೈಸೂರು: ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ವೃತ್ತಿ ಕಲಾವಿದರನ್ನು ಕಡೆಗಣಿಸಲಾಗಿದೆ ಎಂದು ಮೈಸೂರು ನಗರ ಮತ್ತು ಜಿಲ್ಲಾ ಸಾಂಸ್ಕೃತಿಕ ವೃತ್ತಿ ಕಲಾವಿದರ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಪುಟ್ಟಸ್ವಾಮಿ ಆರೋಪಿಸಿದರು.
ದಸರೆಯಲ್ಲಿ ಒಂಬತ್ತು ದಿನಗಳ ಕಾಲ ಜರುಗುವ ಕಾರ್ಯಕ್ರಮಗಳ ಪಟ್ಟಿ ಪ್ರಕಟಿಸಲಾಗಿದ್ದು, ಈ ಪಟ್ಟಿಯಲ್ಲಿ ಯಾವುದೇ ಸೂಕ್ತ ಮಾನದಂಡ ಅನುಸರಿಸಿಲ್ಲ. ಅಧಿಕಾರಿಗಳು ತಮಗೆ ಬೇಕಾದವರನ್ನು ಆಯ್ಕೆ ಮಾಡಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಕರೊನಾ ನಂತರ ಯಾವುದೇ ಕಾರ್ಯಕ್ರಮಗಳು ಸಿಗದೆ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಈಗಲೂ ಅವರ ಜೀವನ ದುಸ್ಥಿತಿಯಲ್ಲಿದ್ದು, ದಸರಾ ಕಾರ್ಯಕ್ರಮಗಳು ದೊರೆಯುತ್ತವೆ ಎನ್ನುವ ಆಶಾಭಾವನೆಯಲ್ಲಿದ್ದರು. ಈಗ ನಿರ್ಲಕ್ಷ್ಯ ಮಾಡಲಾಗಿದೆ. ಈಗಾಲಾದರೂ ಯಾವುದಾದರೂ ವೇದಿಕೆಯಲ್ಲಿ ಸ್ಥಳೀಯ ನೈಜ ಕಲಾವಿದರಿಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಪದಾಧಿಕಾರಿಗಳಾದ ಬಿ.ಶ್ರೀಕಂಠರಾವ್, ಆರ್.ಲಕ್ಷ್ಮಣ್, ಚಿಕ್ಕಪ್ಪಾಜಿ, ವಿನ್ಸೆಂಟ್, ಶಿವಕುಮಾರ್ ಇದ್ದರು.