ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹ

22 YERRISWAMY 01
Published on

ಬಳ್ಳಾರಿ : ಜಿಲ್ಲೆಯ ಸ್ಥಳೀಯ ಮಟ್ಟದ ಕಲಾ ಪ್ರತಿಭೆಗಳನ್ನು ಗುರುತಿಸಿ, ಅವರ ಸಾಧನೆಯ ಬೆಳೆವಣಿಗೆ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳ ಮೂರನೆಯ ಶನಿವಾರದಂದು ಆಯೋಜಿಸುವ ತಿಂಗಳ ಸೊಬಗು ಸಾಂಸ್ಕ್ರತಿಕ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ.
ಇಲ್ಲಿನ ಸಾಂಸ್ಕ್ರತಿಕ ಸಮುಚ್ಛಯ ಆವರಣದ ನಾಡೋಜ ಸುಭದ್ರಮ್ಮ ಮನ್ಸೂರು ಬಯಲು ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ಸಾಂಸ್ಕೃತಿಕ ಸಮುಚ್ಚಯ ನಿರ್ವಹಣಾ ಸಮಿತಿ ಸಹಯೋಗದೊಂದಿಗೆ ನಡೆದ ತಿಂಗಳ ಸೊಬಗು ಸಾಂಸ್ಕ್ರತಿಕ ಕಾರ್ಯಕ್ರಮವು ಕಲಾ ಪ್ರೇಕ್ಷಕರ ಅಸ್ವಾದನೆಗೆ ಸಾಕ್ಷಿಯಾಯಿತು.
ಮೂರು ಸಾವಿರಕ್ಕೂ ಅಧಿಕ ಜಾದು ಕಾರ್ಯಕ್ರಮ ನೀಡಿದ, ಅಂತರಾಷ್ಟ್ರೀಯ ಜಾದು ಪ್ರಶಸ್ತಿಯ ಪುರಸ್ಕ್ರತ ಬಳ್ಳಾರಿಯ ಪ್ರಕಾಶ ಹೆಮ್ಮಾಡಿ ಅವರ ಜಾನಪದ ಜಾದುವಿನ ಕೈ ಚಳಕಕ್ಕೆ ನೆರೆದಿದ್ದ ಪ್ರೇಕ್ಷಕರು ವಿಸ್ಮಯಗೊಳ್ಳುತ್ತಾ ಚಪ್ಪಾಳೆಯ ಸುರಿಮಳೆಗೈದರು. ಅವರಿಗೆ ಪತ್ನಿ ನೇತ್ರಾವತಿ ಹೆಮ್ಮಾಡಿ ಸಹಕಾರ ನೀಡಿದರು. ಇನ್ನೂ ಸಿರುಗುಪ್ಪ ತಾಲೂಕಿನ ಧಾತ್ರಿ ರಂಗ ಸಂಸ್ಥೆಯ ಶ್ರೀಕೃಷ್ಣ ಸಂಧಾನ ಹಾಸ್ಯ ನಾಟಕಕ್ಕೆ ಕಲಾಭಿಮಾನಿಗಳು ಮನಸ್ಸು ಬಿಚ್ಚಿ ನಕ್ಕು ನಲಿದು, ಭರಪೂರ ಮನರಂಜನೆ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net