ಸ್ಥಳಿಯ ಉದ್ದಿಮೆಗೆ ಉತ್ತೇಜನ ನೀಡಿ

09
Published on

ಸ್ವದೇಶಿ ಜಾಗರಣ ಮಂಚ್​ ದಕ್ಷಿಣ ಪ್ರಾಂತೀಯ ಪ್ರಮುಖ್​ ವಿಜಯಕೃಷ್ಣ ಕರೆ

ತುಮಕೂರು: ಗ್ಯಾಟ್​ ಒಪ್ಪಂದದ ಕಾರಣಕ್ಕೆ ಜಾರಿಯಾದ ಜಾಗತೀಕರಣ, ಉದಾರೀಕರಣ, ಖಾಸಗೀಕರಣಕ್ಕೆ ಸಡ್ಡು ಹೊಡೆದು, ಸ್ಥಳಿಯ ಸಣ್ಣ ಮತ್ತು ಮಧ್ಯಮ, ಗುಡಿ ಕೈಗಾರಿಕೆಗಳಿಗೆ ಮಾರುಕಟ್ಟೆ ಒದಗಿಸುವುದೇ ಸ್ವದೇಶಿ ಮೇಳದ ಮೂಲ ಉದ್ದೇಶವಾಗಿದೆ ಎಂದು ಸ್ವದೇಶಿ ಜಾಗರಣ ಮಂಚ್​ ದಕ್ಷಿಣ ಪ್ರಾಂತೀಯ ಪ್ರಮುಖ್​ವಿಜಯಕೃಷ್ಣ ತಿಳಿಸಿದರು.

ನಗರದ ಗಾಜಿನಮನೆಯಲ್ಲಿ ಸ್ವದೇಶಿ ಜಾಗರಣ್​ ಮಂಚ್​ ಆಯೋಜಿಸಿರುವ ಐದು ದಿನಗಳ ಸ್ವದೇಶಿ ಮೇಳಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಜಾಹಿರಾತು ವ್ಯಾಮೋಹಕ್ಕೆ ಬಲಿಯಾಗದೆ, ಕೊಳ್ಳುಬಾಕ ಸಂಸತಿಯಿಂದ ಹೊರಬಂದು, ಸ್ವದೇಶಿ ವಸ್ತುಗಳನ್ನು ಕೊಳ್ಳುವ ಮೂಲಕ ಸ್ಥಳಿಯ ಉದ್ದಿಮೆದಾರರಿಗೆ ಉತ್ತೇಜನ ನೀಡುವ ಕೆಲಸ ಮಾಡಿದರೇ ಅದೇ ನಿಜವಾದ ದೇಶಪ್ರೇಮ ಎಂದರು. ಸ್ವದೇಶಿ ಮೇಳ ಇಲ್ಲಿ ಮೇಳ ನಡೆಯುವ ಐದು ದಿನಗಳು ಇದ್ದರೆ ಸಾಲದು, ಅದು ಜೀವನದಲ್ಲಿ ಹಾಸು ಹೊಕ್ಕಾಗಬೇಕು. ದೊಡ್ಡ ದೊಡ್ಡ ಉದ್ದಿಮೆಗಳಿಂದ ನಿರುದ್ಯೋಗ ನಿವಾರಣೆ ಸಾಧ್ಯವಿಲ್ಲ. ಸಣ್ಣ, ಮಧ್ಯಮ ಗಾತ್ರದ, ಹೆಚ್ಚು ಯಾಂತ್ರಿಕರಣವಲ್ಲದ ಉದ್ಯಮಗಳಿಂದ ಉದ್ಯೋಗ ಲಭ್ಯವಾಗಲಿದೆ ಎಂದರು.

ಒಂದು ಅಂದಾಜಿನ ಪ್ರಕಾರ ಒಂದು ವರ್ಷಕ್ಕೆ 1.20 ಕೋಟಿ ಪದವಿಧರರಲ್ಲಿ ಸರ್ಕಾರಿ ಉದ್ಯೋಗ ದೊರೆಯುವುದು ಕೇವಲ 10 ಲಕ್ಷ ಜನರಿಗೆ ಮಾತ್ರ. ಇದು ಒಟ್ಟಾರೆ ಉದ್ಯೋಗದ ಶೇ.3.3 ಮಾತ್ರ. ಇನ್ನೂ ಟಾಟಾ, ಬಿರ್ಲಾ ಅವರಂತಹ ದೊಡ್ಡ ಕಂಪನಿಗಳಿಂದ ಶೇ 4.5ರಿಂದ 5ರಷ್ಟು ಜನರಿಗೆ ಮಾತ್ರ ಉದ್ಯೋಗ ದೊರೆಯಲಿದೆ. ಉಳಿದಂತೆ ಕೃಷಿ ಶೇ.44ರಷ್ಟು ಯುವಜನರಿಗೆ ಉದ್ಯೋಗ ಒದಗಿಸಿದರೆ, ಎಂ.ಎಸ್​.ಎಂ.ಇ ಶೇ.34ರಷ್ಟು ಜನರಿಗೆ ಉದ್ಯೋಗ ಒದಗಿಸಿದೆ ಎಂದರು. ಸಾನಿಧ್ಯ ವಹಿಸಿದ್ದ ಶ್ರೀಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಸ್ವಾತಂತ್ರ$್ಯ ಪೂರ್ವದಲ್ಲಿ ಉಪ್ಪಿನಿಂದ ಹಿಡಿದು ಎಲ್ಲವೂ ನಮ್ಮದೆ ಆಗಿತ್ತು. ವ್ಯಾಪಾರಕ್ಕೆಂದು ಬಂದವರು ಎಲ್ಲವನ್ನು ತಮ್ಮ ಕೈವಶ ಮಾಡಿಕೊಂಡರು. ಸ್ವಾತಂತ್ರ ಬಂದು 75 ವರ್ಷ ಕಳೆದರೂ ವಿದೇಶಿ ಸಂಸತಿಯಿಂದ ಸ್ವದೇಶಿ ಸಂಸತಿಗೆ ಮರಳಲು ಸಾಧ್ಯವಾಗುತ್ತಿಲ್ಲ ಎಂದರು.

ರಾಸಾಯನಿಕ ಕೃಷಿಯಿಂದ ವ್ಯವಸಾಯವಷ್ಟೇ ಅಲ್ಲ. ಗಾಳಿ ನೀರು, ಪರಿಸರ ಎಲ್ಲವೂ ಕುಲುಷಿತಗೊಂಡಿದೆ. ಸಿರಿಧಾನ್ಯಗಳು ಮರೆಯಾಗಿದೆ. ಸ್ವದೇಶಿ ಮೇಳದಿಂದಾಗಿ ಜನರು ನಿಧಾನವಾಗಿ ಸ್ವದೇಶಿ ವಸ್ತುಗಳತ್ತ ಆಕರ್ಷಿತರಾಗುತ್ತಿದ್ದಾರೆ. ಹಾಗಾಗಿ, ಜನರು ಇತ್ತ ಗಮನಹರಿಸಬೇಕು ಎಂದರು. ಶಾಸಕ ಜಿ.ಬಿ.ಜೋತಿಗಣೇಶ್​, ಸ್ವದೇಶಿ ಮೇಳದ ಸಂಯೋಜಕ ಡಾ.ಪ್ರಕಾಶ್​ ಪಾಲ್ತೆ, ಸಂಚಾಲಕಿ ಅಂಬಿಕಾ, ನಟಿ ತಾರಾ, ಜಿಲ್ಲಾಧಿಕಾರಿ ಶುಭಕಲ್ಯಾಣ್​, ಸಂಘಟಕಿ ವಾಸವಿಗುಪ್ತ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net