

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಬುಧವಾರ ಬೆಳಗ್ಗೆ ಆರಂಭವಾಗಿದ್ದ ಇಲ್ಲಿಯ ಭೈರಿದೇವರಕೊಪ್ಪದ ಸೈಯದ್ ಹಜರತ್ ಮೆಹಮೂದ್ ಶಹಾ ಖಾದ್ರಿ ದರ್ಗಾದ ತೆರವು ಕಾರ್ಯಾಚರಣೆ ಹಾಗೂ ಗೋರಿಗಳ ಸ್ಥಳಾಂತರ ಪ್ರಕ್ರಿಯೆ ಗುರುವಾರ ಬೆಳಗ್ಗೆ 5.30ರ ಸುಮಾರಿಗೆ ಪೂರ್ಣಗೊಂಡಿದೆ.
ದರ್ಗಾದ ಸುತ್ತಲಿನ ಪ್ರಾರ್ಥಾನಾ ಮಂದಿರ, ವಾಣಿಜ್ಯ ಮಳಿಗೆ ಕಾಂಪೌಂಡ್ ಬುಧವಾರ ಮಧ್ಯಾಹ್ನವೇ ತೆರುವುಗೊಳಿಸಲಾಗಿತ್ತು. ಆದರೆ, ಅಂಜುಮನ್ ಸಂಸ್ಥೆಯವರು ಮತ್ತು ದರ್ಗಾ ಕಮಿಟಿ ಅವರು ದರ್ಗಾದಲ್ಲಿದ್ದ ಗೋರಿಗಳಿಗೆ ಧಕ್ಕೆಯಾಗದಂತೆ ಸ್ವಯಂ ಪ್ರೇರಿತವಾಗಿ ಪಡೆಯಲು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು, ಅನುಮತಿ ನೀಡಿದ್ದರು.
ಬಳಿಕ ನುರಿತ ಇಂಜಿನಿಯರ್ಗಳ, ತಜ್ಞರ ಸಲಹೆ ಪಡೆದು ಆಧುನಿಕ ಯಂತ್ರೋಪಕರಣ ಬಳಿಸಿಕೊಂಡು ಕಾರ್ಯಾಚರಣೆ ಮುಂದುವರಿಸಿದರು. ಸೈಯದ್ ಹಜರತ್ ಮೆಹಮೂದ್ ಶಹಾ ಖಾದ್ರಿ ಹಾಗೂ ಅವರ ಸೇವಕರಿಬ್ಬರ ಗೋರಿಗಳನ್ನು ಯಥಾವತ್ತಾಗಿ ಸ್ಥಳಾಂತರ ಮಾಡಲಾಯಿತು. ಮುಸ್ಲಿಂ ಸಮುದಾಯದ ಮುಖಂಡರು ಮತ್ತು ಮೌಲ್ವಿಗಳ ಸಮ್ಮುಖದಲ್ಲಿ ಧಾರ್ವಿುಕ ವಿಧಿ-ವಿಧಾನಗಳನ್ನು ಆಚರಿಸಿ, ದರ್ಗಾ ಹಿಂದುಗಡೆಯ ಜಾಗದಲ್ಲಿ ಮರು ಸ್ಥಾಪನೆ ಮಾಡಲಾಯಿತು.
ಪ್ರತಿ ಗುರುವಾರ ದರ್ಗಾಕ್ಕೆ ಆಗಮಿಸುತ್ತಿದ್ದ ಭಕ್ತರು, ಪೊಲೀಸ್ ಸರ್ಪಗಾವಲು ಇರುವ ಹಿನ್ನೆಲೆಯಲ್ಲಿ ಹಿಂತಿರುಗಿದರು. ದರ್ಗಾ ಸುತ್ತಲೂ ಬ್ಯಾರಿಕೇಡ್ ಹಾಕಲಾಗಿದ್ದು, ವಾಹನ, ಜನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಡಿ. 23ರಂದು ಬೆಳಗ್ಗೆ 6ರವರೆಗೆ ನಿಷೇಧಾಜ್ಞೆ ಮುಂದುವರಿದಿದೆ. ಎರಡು ದಿನಗಳವರೆಗೆ ಬಿಆರ್ಟಿಎಸ್, ಪೊಲೀಸ್, ಜಿಲ್ಲಾಡಳಿತದ ಸಮ್ಮುಖದಲ್ಲಿ ನಡೆದ ಕಾರ್ಯಾಚರಣೆ ಅಂತ್ಯ ಕಂಡಿದೆ. ಅಳಿದುಳಿದ ಅವಶೇಷಗಳನ್ನು ವಿಲೇವಾರಿ ಮಾಡಲು ಹು-ಧಾ ಮಹಾನಗರ ಪಾಲಿಕೆಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಬಿಜೆಪಿಯವರು ತಮ್ಮ ಉದ್ದೇಶವನ್ನು ಈಡೇರಿಸಿಕೊಂಡಿದ್ದಾರೆ. ಅವರು ಶಾಂತತೆ ಸಹಿಸಿಕೊಳ್ಳುವುದಿಲ್ಲ. ಗಲಭೆ ಹುಟ್ಟು ಹಾಕಬೇಕು ಎನ್ನುವವರು. ಆದರೆ, ಮುಸ್ಲಿಂ ಸಮಾಜದವರು ಇದಕ್ಕೆ ಅವಕಾಶ ಕೊಡಲಿಲ್ಲ. ಕಾನೂನು ಗೌರವಿಸುವ ಕೆಲಸ ಮಾಡಿದ್ದಾರೆ. ಮುಸ್ಲಿಮರು ಈ ದೇಶದ ಸ್ವಾತಂತ್ರ್ಯ್ಕಾಗಿ ಹೋರಾಟ ಮಾಡಿದ್ದಾರೆ. ಬಿಜೆಪಿಯವರು ಮಾತ್ರ ತಾವೇ ದೇಶಪ್ರೇಮಿಗಳು ಎಂದು ಬಿಂಬಿಸಿಕೊಂಡು ಇತಿಹಾಸ ತಿರುಚುವ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ದಲಿತರ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದವು. ಆಗ ಪ್ರಕೃತಿ ಅಂಬೇಡ್ಕರ್ ಅವರಂಥವರನ್ನು ಸೃಷ್ಟಿಸಿತು. ಇದಕ್ಕೂ ಕೂಡ ಮುಂದೆ ಉತ್ತರ ಸಿಗಲಿದೆ.
-ಪ್ರಸಾದ ಅಬ್ಬಯ್ಯ, ಶಾಸಕ
ಕಾನೂನು ಪ್ರಕಾರ ದರ್ಗಾ ತೆರವು ಮಾಡಿಕೊಳ್ಳಲು ಹೇಳಿದ್ದೆವು. ಗೋರಿಗಳ ಸ್ಥಳಾಂತರ ವಿಷಯ ನಮಗೆ ಬಿಡುವಂತೆ ಕೇಳಿಕೊಂಡಿದ್ದೆವು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು, ಸಹಕಾರ ನೀಡುವುದಾಗಿ ಭರವಸೆ ನೀಡಿದ್ದರು. ಅಂತೆಯೇ ಗುರುವಾರ ಬೆಳಗ್ಗೆ ನಾವು, ದರ್ಗಾ ಕಮಿಟಿ ಸದಸ್ಯರು, ಧಾರ್ವಿುಕ ಗುರುಗಳು, ಮೌಲ್ವಿಗಳು ಇಸ್ಲಾಂ ಪದ್ಧತಿ ಪ್ರಕಾರ 3 ಗೋರಿಗಳನ್ನು ಬೇರೆಡೆ ಸ್ಥಾಪನೆ ಮಾಡಲಾಯಿತು.
-ಯುಸೂಫ್ ಸವಣೂರ, ಹುಬ್ಬಳ್ಳಿ ಅಂಜುಮನ್ ಎ ಇಸ್ಲಾಂ ಸಂಸ್ಥೆ ಮಾಜಿ ಅಧ್ಯಕ್ಷ
ಭೂಸ್ವಾಧೀನ ಪ್ರಕ್ರಿಯೆ ಪೂರ್ಣ ಪ್ರಮಾಣದಲ್ಲಿ ಮುಗಿದಿದೆ. ಒಂದು ಗುಂಟೆ ನಾಲ್ಕಾಣೆ ಜಾಗ, ಬಿಆರ್ಟಿಎಸ್ಗೆ ಸ್ವಾಧೀನಪಡಿಸಿಕೊಳ್ಳಲಾಗಿದೆ. ಪಾಲಿಕೆಯವರು ಅಳಿದುಳಿದ ಕಟ್ಟಡ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿದ್ದಾರೆ.
-ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ