ಸ್ಥಳ ನಿಯುಕ್ತಿಗಾಗಿ ಕೌನ್ಸೆಲಿಂಗ್

0411Klb04
Published on

ಕಲಬುರಗಿ: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ವೃಂದದ (೬-೮ನೇ ತರಗತಿ) ನೇಮಕಾತಿಗೆ ಸಂಬಂಧಿಸಿದಂತೆ ಸ್ಥಳ ನಿಯುಕ್ತಿಗಾಗಿ ನಗರದ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಶನಿವಾರ ನಡೆಯಿತು.

ಗಣಿತ ಮತ್ತು ವಿಜ್ಞಾನ, ಸಮಾಜ ವಿಜ್ಞಾನ, ಜೀವ ವಿಜ್ಞಾನ ಮತ್ತು ಆಂಗ್ಲ ಭಾಷಾ ಹುದ್ದೆಗಳಿಗೆ ಸ್ಥಳ ನಿಯುಕ್ತಿ ಕೌನ್ಸೆಲಿಂಗ್ ನಡೆಯಿತು. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ದಾಖಲಿಸಿದ ಅರ್ಜಿ, ಅಂಗೀಕೃತ ಗುರುತಿನ ಚೀಟಿ, ೨೦ರೂ. ಛಾಪಾ ಕಾಗದ, ಅಂಗವಿಕಲರಾದಲ್ಲಿ ಪ್ರಮಾಣಪತ್ರ ಸೇರಿ ಅಗತ್ಯ ದಾಖಲೆಗಳೊಂದಿಗೆ ಹಾಜರಾಗಿ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಿದ್ದರು.

ಮುಖ್ಯ ಆಯ್ಕೆ ಪಟ್ಟಿಯಲ್ಲಿನ ಕೌನ್ಸೆಲಿಂಗ್‌ಗೆ ಅಭ್ಯರ್ಥಿಗಳ ಹೆಸರುಗಳನ್ನು ನ.೨ರಂದು ಇಲಾಖೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು. ಶಿಕ್ಷಣ ಇಲಾಖೆಯಿಂದ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಿದ್ದ ಅಭ್ಯರ್ಥಿಗಳಿಗೆ ಕುಡಿಯಲು ನೀರು, ನೆರಳು, ಆಸನದ ವ್ಯವಸ್ಥೆ ಮಾಡಲಾಯಿತು. ಬೆಳಗ್ಗೆ ೧೦ರಂದು ತಡರಾತ್ರಿವರೆಗೆ ಕೌನ್ಸೆಲಿಂಗ್ ನಡೆಯಿತು. ಬಾಕಿ ಉಳಿದ ಹುದ್ದೆಗಳಿಗೆ ಸೋಮವಾರವೂ ಕೌನ್ಸೆಲಿಂಗ್ ಮುಂದುವರಿಯಲಿದೆ.

ಕಾರಣವಿಲ್ಲದೆ ಅಭ್ಯರ್ಥಿಗಳ ಹೆಸರು ಕೈಬಿಟ್ಟ ಇಲಾಖೆ: ಆಯ್ಕೆ ಪಟ್ಟಿಯಲ್ಲಿ ಪ್ರಕಟಿಸಿದ್ದ ಹಲವು ಅಭ್ಯರ್ಥಿಗಳ ಹೆಸರನ್ನು ಕೌನ್ಸೆಲಿಂಗ್ ಪಟ್ಟಿಯಲ್ಲಿ ಕೈಬಿಡಲಾಗಿದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಯಾವುದೇ ಕಾರಣ ಹೇಳದೆ ನಮ್ಮ ಹೆಸರನ್ನು ಕೈಬಿಡಲಾಗಿದೆ. ಈ ಕುರಿತು ಡಿಡಿಪಿಐ ಕಚೇರಿ ಅಧಿಕಾರಿಗಳನ್ನು ಕೇಳಿದರೆ ಇಲಾಖೆಗೆ ಪತ್ರ ಬರೆದಿದ್ದು, ಅವರು ಉತ್ತರಿಸಿದ ನಂತರ ತಿಳಿಸಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ ಎಂದು ಅಭ್ಯರ್ಥಿಯೊಬ್ಬರು ತಿಳಿಸಿದರು.
ಇನ್ನು ೩೭೧(ಜೆ), ವಿವಾಹಿತ ಮಹಿಳೆಯರ ತಂದೆ, ಪತ್ನಿ ಕುರಿತ ಗೊಂದಲಗಳ ಬಗ್ಗೆ ನ್ಯಾಯಾಲಯದ ಆದೇಶದಿಂದ ಪ್ರಭಾವಿತರಾಗುವ ಹುದ್ದೆಗಳನ್ನು ಕಾಯ್ದಿರಿಸಿ ಉಳಿದ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net