

ಅರಕಲಗೂಡು: ತಾಲೂಕಿನಲ್ಲಿ ಹಾದುಹೋಗಿರುವ ಹಾಸನ-ಪಿರಿಯಾಪಟ್ಟಣ ಮಾರ್ಗದ ರಸ್ತೆಗೆ ಮರು ಡಾಂಬರು ಹಾಕುವ ಕಾರ್ಯ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.
ಹಳೇಬೀಡು-ಆನೆಚೌಕೂರು ರಾಜ್ಯ ಹೆದ್ದಾರಿಗೆ ಸೇರಿದ ಈ ಮಾರ್ಗದ ರಸ್ತೆಗೆ ಹಾಸನದಿಂದ ಪಿರಿಯಾಪಟ್ಟಣದ ತನಕ 73 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸಲಾಗಿತ್ತು. ರಸ್ತೆ ಅಲಲ್ಲಿ ಗುಂಡಿ ಬಿದ್ದು ಹಾಳಾದ ಕಾರಣ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿದ್ದ ಮಧ್ಯಪ್ರದೇಶದ ಭೂಪಾಲ್‌ನ ದಿಲೀಪ್ ಬಿಲ್ಡರ್ ಕಂಪನಿ ಕಳೆದ ಕೆಲ ತಿಂಗಳಿನಿಂದ ಕಾಮಗಾರಿ ಕೈಗೆತ್ತಿಕೊಂಡಿತ್ತು.
ಕಳೆದ ತಿಂಗಳು ಬರಗೂರು, ದಾಸನಪುರ ಬಳಿ ಕಳಪೆ ಡಾಂಬರು ಹಾಕಲಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಮುಗಳೂರು ಬಳಿ ಕಳಪೆಯಾಗಿ ಹಾಕಿದ್ದ ಡಾಂಬರು ಕಿತ್ತು ಬಂದಿತ್ತು. ಗುತ್ತಿಗೆದಾರ ವಹಿಸಿಕೊಂಡಿದ್ದ ಕಂಪನಿ ಇಂಜಿನಿಯರ್ ಸ್ಥಳಕ್ಕೆ ಧಾವಿಸಿ ಜೆಸಿಬಿ ಮೂಲಕ ಕಳಪೆ ಡಾಂಬರು ತೆರವುಗೊಳಿಸಿದ್ದರು. ಇದೀಗ ಕಳಪೆಯಾದ ಸ್ಥಳಕ್ಕೆ ಮರು ಡಾಂಬರೀಕರಣ ಮಾಡದೆ ಪ್ರಯಾಣಿಕರ ಸಂಚಾರಕ್ಕೆ ಸಂಚಕಾರ ಉಂಟಾಗಿದೆ.
ಕಳೆದ ಹಲವಾರು ವರ್ಷಗಳಿಂದ ಗುಂಡಿ ಹೊಂಡಗಳಿಂದ ಕೂಡಿದ್ದ ಹಾಸನ-ಪಿರಿಯಾಪಟ್ಟಣ ಮಾರ್ಗದ ರಸ್ತೆ ಅಭಿವೃದ್ಧಿ ಕಂಡಿರಲಿಲ್ಲ. ಜಿಲ್ಲಾ ಕೇಂದ್ರ ಹಾಸನ ಹಾಗೂ ತಾಲೂಕು ಕೇಂದ್ರ ಅರಕಲಗೂಡಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿ ಇದಾಗಿದೆ. ಜಿಲ್ಲೆಯ ಗಡಿಭಾಗದ ಕೇರಳಾಪುರ, ಲಕ್ಕೂರು, ಮಲ್ಲಾಪುರ, ಕಡುವಿನಹೊಸಹಳ್ಳಿ, ಕೊಣನೂರು ಹಾಗೂ ರಾಮನಾಥಪುರ ಹೋಬಳಿ ಭಾಗದ ಹತ್ತಾರು ಹಳ್ಳಿಗಳಿಂದ ನಿತ್ಯ ಸಾವಿರಾರು ಸಾರ್ವಜನಿಕರು ಓಡಾಡುವ ರಸ್ತೆ ಸ್ಥಿತಿ ಹೇಳತೀರದಾಗಿತ್ತು. ಮಡಿಕೇರಿ, ಪಿರಿಯಾಪಟ್ಟಣ ಭಾಗದ ಮೈಸೂರು ಜಿಲ್ಲೆಯ ಹಳ್ಳಿಗಳ ಜನರು ಹಾಸನಕ್ಕೆ ಬರಲು ಇದೇ ರಸ್ತೆ ಅವಲಂಬಿಸಿದ್ದಾರೆ. ದಶಕಗಳ ಕಾಲ ವಾಹನಗಳು ರಸ್ತೆಗಿಳಿಯದಷ್ಟರ ಮಟ್ಟಿಗೆ ಗುಂಡಿ ಹೊಂಡಗಳು ಬಾಯ್ತೆರೆದು ಹದಗೆಟ್ಟಿದ್ದ ರಸ್ತೆ ಅಭಿವೃದ್ಧಿ ಪಡಿಸುವಂತೆ ಸಾರ್ವಜನಿಕರು ಸಾಕಷ್ಟು ಸಲ ಪ್ರತಿಭಟನೆ ನಡೆಸಿದ್ದರೂ ಪ್ರಯೋಜನ ಆಗಿರಲಿಲ್ಲ.
ತಾಲೂಕಿನ ಮೋಕಲಿ ಬಳಿ ಹೊಂಡಕ್ಕಿಳಿದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಂಚರಿಸುತ್ತಿದ್ದ ಗರ್ಭಿಣಿ ಮಹಿಳೆಗೆ ಬಸ್‌ನಲ್ಲೇ ಹೆರಿಗೆಯಾಗಿತ್ತು. ರಸ್ತೆ ಅಭಿವೃದ್ಧಿಪಡಿಸುವ ಕುರಿತು ಜಿಲ್ಲೆಯ ಜನಪ್ರತಿನಿಧಿಗಳು ಕ್ಯಾರೆ ಎನ್ನದೆ ಪ್ರಯಾಣಿಕರ ಸ್ಥಿತಿ ಯಾತನಮಯವಾಗಿತ್ತು. ಕಳೆದ 2017ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಹಾಗೂ ಎಚ್.ಸಿ.ಮಹದೇವಪ್ಪ ಅವರು ಲೋಕೋಪಯೋಗಿ ಸಚಿವರಾಗಿದ್ದಾಗ ಶಾಸಕ ಎ.ಮಂಜು ಅವರ ಮನವಿ ಮೇರೆಗೆ ರಸ್ತೆ ಅಭಿದ್ಧಿಗೆ ಹಸಿರು ನಿಶಾನೆ ದೊರಕಿತ್ತು. ಅಂದು ಕಾಮಗಾರಿಯ ಗುತ್ತಿಗೆ ಕರಾರಿನಂತೆ ಆರು ವರ್ಷಗಳ ಕಾಲ ರಸ್ತೆ ಅಭಿವೃದ್ಧಿ ನಿರ್ವಹಣೆ ಹೊಣೆ ಹೊತ್ತಿದ್ದ ಕಂಪನಿ ರಸ್ತೆ ದುರಸ್ತಿಯ ಜವಾಬ್ದಾರಿಯನ್ನೇ ಮರೆತಂತಿದೆ. ಕೆಲವು ಕಡೆ ಬೇಕಾಬಿಟ್ಟಿಯಾಗಿ ಮರು ಡಾಂಬರು ನಡೆಸುತ್ತಿದ್ದು ಕಳಪೆ ಕಾಮಗಾರಿ ವಿರುದ್ಧ ಸಾರ್ವಜನಿಕರಿಂದ ಆರೋಪ ಕೇಳಿಬರುತ್ತಿದೆ.
ಟೋಲ್ ಬರೆ: ಹಾಸನ-ಪಿರಿಯಾಪಟ್ಟಣ ಮಾರ್ಗದ ಈ ರಸ್ತೆಗೆ ತಾಲೂಕಿನ ನಿಲುವಾಗಿಲು ಹಾಗೂ ಕಟ್ಟಾಯ ಬಳಿ ಪ್ರಯಾಣಿಕರಿಂದ ಟೋಲ್ ಸುಂಕ ವಸೂಲಿ ಮಾಡಲಾಗುತ್ತಿದೆ. ಪ್ರಯಾಣಿಕರಿಗೆ ಟೋಲ್ ಸುಂಕದ ಬರೆ ಎಳೆಯುತ್ತಿದ್ದರೂ ರಸ್ತೆ ನಿರ್ವಹಣೆ ಮಾತ್ರ ಮರೀಚಿಕೆಯಾಗಿದೆ. ಗುತ್ತಿಗೆದಾರ ಕಂಪನಿ ಮನಸ್ಸೋಇಚ್ಛೆ ಕಳಪೆ ಕಾಮಗಾರಿ ನಡೆಸುತ್ತಿದ್ದರೂ ಹೇಳುವವರು ಕೇಳುವವರೇ ಇಲ್ಲವಾಗಿದ್ದಾರೆ.
ಟೋಲ್ ಪ್ಲಾಜಾದಲ್ಲಿ ಪ್ರಯಾಣಿಕರಿಗೆ ಕನಿಷ್ಠ ಮೂಲ ಸೌಕರ್ಯಗಳನ್ನೂ ಕಲ್ಪಿಸಿಲ್ಲ. ಶೌಚಗೃಹ, ಕುಡಿಯುವ ನೀರಿನ ಸೌಲಭ್ಯ ಇಲ್ಲ. ಕಟ್ಟಾಯ ಬಳಿ ಕಳೆದ ತಿಂಗಳು ಕರವೇ ಕಾರ್ಯಕರ್ತರು ಟೋಲ್ ಬಳಿ ಸುಂಕ ವಸೂಲಿ ತಡೆಗಟ್ಟಿ ರಸ್ತೆ ತಡೆದು ಪ್ರಯಾಣಿಕರಿಗೆ ಮೂಲಸೌಕರ್ಯ ಒದಗಿಸುವಂತೆ ಪ್ರತಿಭಟನೆ ನಡೆಸಿದ್ದರು. ನಿಲುವಾಗಿಲು ಟೋಲ್ ಬಳಿಯೂ ಪ್ರಯಾಣಿಕರಿಗೆ ಮೂಲ ಸೌಕರ್ಯ ಒದಗಿಸದೆ ನಿರ್ಲಕ್ಷ್ಯಿಸಲಾಗಿದೆ.
ಹಾಸನದಿಂದ ಹೊಳೆನರಸೀಪುರ ಮಾರ್ಗವಾಗಿ ಮೈಸೂರಿಗೆ ಹಾದುಹೋಗಿರುವ ಬೇಲೂರು-ಬಿಳಿಕೆರೆ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಬಿಳಿಕೆರೆ-ಬೇಲೂರು ಮಾರ್ಗದ ರಸ್ತೆಗೆ ಟೋಲ್ ಸುಂಕ ಇಲ್ಲ. ಆದರೆ ಹಾಸನ-ಪಿರಿಯಾಪಟ್ಟಣ ಮಾರ್ಗದ ರಸ್ತೆಯಲ್ಲಿ ಪ್ರಯಾಣ ಮಾಡುವ ವಾಹನಗಳಿಗೆ ಟೋಲ್ ಸುಂಕದ ವಿಧಿಸಲಾಗುತ್ತಿದೆ. ಟೋಲ್ ನಿಯಮಗಳನ್ನು ಗಾಳಿಗೆ ತೂರಲಾಗಿದ್ದು ಪ್ರಯಾಣಿಕರಿಗೆ ಮೂಲ ಸೌಕರ್ಯಗಳು ಇಲ್ಲದೆ ಅತ್ತ ರಸ್ತೆ ಅಭಿವೃದ್ಧಿ ನಿರ್ವಹಣೆಯೂ ಇಲ್ಲವಾಗಿದೆ.
ಹಾಸನ-ಪಿರಿಯಾಪಟ್ಟಣ ಮಾರ್ಗದ ರಸ್ತೆ ಅಭಿವೃದ್ಧಿ ಭಾಗ್ಯ ಕಂಡ ಆರಂಭದಲ್ಲೇ ತಾಲೂಕಿನ ನಿಲುವಾಗಿಲು ಬಳಿ ಟೋಲ್ ಸುಂಕ ವಿಧಿಸುವುದನ್ನು ಖಂಡಿಸಿ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಹಲವಾರು ಸಲ ಪ್ರತಿಭಟನೆ ಹಮ್ಮಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಜನಪ್ರತಿನಿಧಿಗಳು ಕೂಡ ಕ್ಯಾರೆ ಎನ್ನದೆ ಪ್ರತಿಭಟನಾಕಾರರ ಮನವಿಗೆ ಸ್ಪಂದಿಸಲಿಲ್ಲ.
ಇದೀಗ ಟೋಲ್ ಸುಂಕ ವಿಧಿಸುವ ನಿಲುವಾಗಿಲು ಗ್ರಾಮದ ಮುಗಳೂರು ಬಳಿ ಒಂದು ಕಿಮೀ ಅಂತರದಲ್ಲೇ ರಸ್ತೆ ಡಾಂಬರು ಪೂರ್ತಿ ಕಿತ್ತು ಬಂದಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ರಸ್ತೆಗೆ ನಿರ್ಮಿಸುತ್ತಿರುವ ಡಾಂಬರು ಸಂಪೂರ್ಣ ಕಳಪೆಯಾಗಿದ್ದು ಕಿತ್ತು ಬರಲು ಕಾರಣವಾಗಿದೆ. ಕಳಪೆ ಕಾಮಗಾರಿ ವಿರೋಧಿಸಿ ಸ್ಥಳೀಯರು ಬರಗೂರು, ದಾಸನಪುರ ಬಳಿ ಪ್ರತಿಭಟನೆ ನಡೆಸಿದರೂ ಗುತ್ತಿಗೆದಾರ ಗುಣಮಟ್ಟದ ಕಾಮಗಾರಿ ನಡೆಸಲಿಲ್ಲ. ಮಾದಿಹಳ್ಳಿ ಬಳಿ ಜಮೀನಿನಲ್ಲಿ ಅನುಮತಿ ಪಡೆಯದೆ ಗುತ್ತಿಗೆದಾರ ಡಾಂಬರೀಕರಣ ಕಾರ್ಯ ಕೈಗೆತ್ತಿಕೊಂಡಿದ್ದು ಇದರ ವಿರುದ್ಧ ಸ್ಥಳೀಯರ ದೂರಿನ ಮೇರೆ ಉಪ ವಿಭಾಗಾಧಿಕಾರಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು ಕಂಪನಿ ವಿರುದ್ಧ ಕ್ರಮ ಜರುಗಿಸಲಾಗಿದೆ. ಹೀಗಾಗಿ ಕಾಮಗಾರಿ ನಿಲ್ಲಿಸಲಾಗಿದೆ ಎನ್ನುತ್ತಾರೆ ಜಿಪಂ ಮಾಜಿ ಸದಸ್ಯ ರವಿ.
ಹಾಸನ- ಪಿರಿಯಾಪಟ್ಟಣ ಮಾರ್ಗದ ರಸ್ತೆಗೆ ಹಾಕುತ್ತಿರುವ ಡಾಂಬರು ಕಳಪೆಯಾಗಿದೆ. ಹೀಗಾಗಿ ಡಾಂಬರು ಬಾಯ್ತೆರೆದು ಬಿರುಕು ಕಾಣಿಸಿಕೊಂಡಿದೆ. ಕಾಮಗಾರಿ ಕಳಪೆಯಾಗಿರುವುದನ್ನು ಪ್ರಶ್ನಿಸಿದರೆ ಗುತ್ತಿಗೆ ವಹಿಸಿಕೊಂಡಿರುವ ಕಂಪನಿ ಇಂಜಿನಿಯರ್ ಬೇಜವಾಬ್ದಾರಿ ಉತ್ತರ ನೀಡುತ್ತಾನೆ. ಗುಣಮಟ್ಟದ ಕಾಮಗಾರಿ ನಡೆಸಲು ಕ್ರಮ ವಹಿಸಬೇಕು. ಅರುಣ್, ಮುಗಳೂರು ಗ್ರಾಮಸ್ಥ ಮಳೆಯ ಕಾರಣ ರಸ್ತೆಗೆ ಹಾಕಿರುವ ಡಾಂಬರು ಮೇಲೆದ್ದು ಬರುತ್ತಿದೆ. ಅಂತಹ ಜಾಗದಲ್ಲಿ ಜೆಸಿಬಿಯಲ್ಲಿ ತೆರವು ಗೊಳಿಸಲಾಗಿದೆ. ಸದ್ಯದಲ್ಲೇ ರಸ್ತೆಗೆ ಮರು ಡಾಂಬರು ಹಾಕಲು ಕ್ರಮ ಕೈಗೊಳ್ಳಲಾಗುವುದು. ದಿನೇಶ್, ಗುತ್ತಿಗೆದಾರ ಕಂಪನಿ ಇಂಜಿನಿಯರ್