

ಚಾಮರಾಜನಗರ: ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ 2024-25ನೇ ಸಾಲಿನಲ್ಲಿ ಕಿರುಸಾಲ ಯೋಜನೆಯಡಿ ಪರಿಶಿಷ್ಟ ಪಂಗಡದ ಸ್ತ್ರೀಶಕ್ತಿ ಸಂಘಗಳ ಗುಂಪುಗಳಿಗೆ ಆದಾಯೋತ್ಪನ್ನ ಚಟುವಟಿಕೆಗಳ ಘಟಕ, ಸಣ್ಣ ಉದ್ದಿಮೆ ಸ್ಥಾಪನೆಗಾಗಿ ಬಡ್ಡಿರಹಿತ ಸಾಲ ಮಂಜೂರು ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಕಿರುಸಾಲ ಯೋಜನೆಯಡಿ ಟಿ.ಎಸ್.ಪಿ. ಬಳಕೆಯಾಗದ ಅನುದಾನದಡಿ ಪರಿಶಿಷ್ಟ ಪಂಗಡದ ಸ್ತ್ರೀಶಕ್ತಿ ಸಂಘಗಳ ಗುಂಪುಗಳಿಗೆ ಆದಾಯೋತ್ಪನ್ನ ಚಟುವಟಿಕೆಗಳ ಘಟಕ, ಸಣ್ಣ ಉದ್ದಿಮೆಯನ್ನು ಸ್ಥಾಪಿಸಿ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು ಅವಕಾಶ ಕಲ್ಪಿಸುವುದು ಕಿರುಸಾಲ ಯೋಜನೆ ಮುಖ್ಯ ಉದ್ದೇಶವಾಗಿದೆ. ಸಮಾಜದಲ್ಲಿ ಸ್ತ್ರೀಶಕ್ತಿ ಗುಂಪುಗಳು ಆರ್ಥಿಕ ಚಟುವಟಿಕೆ ಕೈಗೊಳ್ಳಲು ಪ. ಪಂಗಡದ ಸ್ತ್ರೀಶಕ್ತಿ ಗುಂಪಿಗೆ 20 ಲಕ್ಷ ರೂ. ಗಳವರೆಗೆ ಸಾಲವನ್ನು ಬಡ್ಡಿರಹಿತವಾಗಿ ನೀಡಲಾಗುವುದು.
ನಿಯಮಗಳು: ಸೌಲಭ್ಯ ಪಡೆಯಲು ಸ್ತ್ರೀಶಕ್ತಿ ಸ್ವ-ಸಹಾಯ ಗುಂಪುಗಳು ತಾಲೂಕು ಒಕ್ಕೂಟಗಳಲ್ಲಿ ನೋಂದಣಿಯಾಗಿರಬೇಕು. ಸ್ತ್ರೀಶಕ್ತಿ ಸ್ವ-ಸಹಾಯ ಗುಂಪು ಬ್ಯಾಂಕುಗಳಿಂದ ಪಡೆದ ಸಾಲಕ್ಕೆ ಸುಸ್ಥಿದಾರ ರಾಗಿರಬಾರದು. ಸದಸ್ಯರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಯಾವುದೇ ಕಾನೂನಿನ ವಿವಾದ, ವ್ಯಾಜ್ಯಗಳಿಗೆ ಒಳಪಟ್ಟಿರಬಾರದು. ಸಾಲವನ್ನು ಗುಂಪಿನಿಂದ ಉತ್ಪಾದನಾ ಘಟಕ, ಸಣ್ಣ ಉದ್ದಿಮೆಯನ್ನು ಸ್ಥಾಪಿಸಲು ಮಾತ್ರ ಬಳಸಿ ಕೊಳ್ಳಬೇಕು, ಸದಸ್ಯರೆಲ್ಲರೂ ಈ ಘಟಕದ ಪಾಲುದಾರರಾಗಿರುತ್ತಾರೆ. ಅರ್ಜಿ ನಮೂನೆ ಭರ್ತಿ ಮಾಡಿ ನಿಗದಿಪಡಿಸಿದ ದಾಖಲೆಗಳನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಗೆ ಆ.30 ರೊಳಗೆ ಸಲ್ಲಿಸಬೇಕು. ಅರ್ಜಿ ಹಾಗೂ ಸಂಪೂರ್ಣ ವಿವರಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಚೇರಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.