ಸ್ತ್ರೀಯರಿಗೆ ಬಲ ತುಂಬಲು ಗೃಹಲಕ್ಷ್ಮಿ ಸಂಘ

Meeting
ಬೀದರ್‌ನಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ರಾಘವೇಂದ್ರ, ಬಿ.ಎಚ್.ನಿಶ್ಚಲ್, ಡಾ.ಶಾಮ್ಲಾ ಇಕ್ಬಾಲ್ ಇದ್ದರು.
Published on

ಬೀದರ್: ರಾಜ್ಯದಲ್ಲಿ ೩೦-೪೦ ಲಕ್ಷ ಗೃಹಲಕ್ಷ್ಮಿ ಸಂಘಗಳನ್ನು ರಚಿಸುವ ಮೂಲಕ ಯಜಮಾನಿಯರಿಗೆ ಆರ್ಥಿಕವಾಗಿ ಬಲ ತುಂಬಲು ಕ್ರಮ ಕೈಗೊಳ್ಳುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಕಲಬುರಗಿ ವಿಭಾಗ ಮಟ್ಟದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎರಡನೇ ದಿನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈ ವರ್ಷ ಅಂಗನವಾಡಿ ಆರಂಭವಾಗಿ ೫೦ ವರ್ಷ ತುಂಬುತ್ತಿದ್ದು, ಅಕ್ಟೋಬರ್‌ನಲ್ಲಿ ಸುವರ್ಣ ಮಹೋತ್ಸವ ನಡೆಸಲಾಗುವುದು. ಈ ವೇಳೆ ಗೃಹಲಕ್ಷ್ಮಿ ಸಂಘಗಳ ಘೋಷಣೆ ಮಾಡಿ ಇನ್ನಷ್ಟು ಬಲ ತುಂಬಲಾಗುವುದು ಎಂದರು.

ಇಲಾಖೆಯಲ್ಲಿ ಸಾಕಷ್ಟು ಯೋಜನೆಗಳಿದ್ದು, ಜನರಲ್ಲಿ ಅರಿವು ಮೂಡಿಸಲು ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳಬೇಕು. ಜನರಿಗೆ, ಜನರ ಬದುಕಿಗೆ ಹತ್ತಿರವಾದ ಇಲಾಖೆ ನಮ್ಮದು. ಅಧಿಕಾರಿಗಳು ಹೆಚ್ಚು ಕಾಳಜಿಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಬಾಲ್ಯವಿವಾಹ ತಡೆಯಲು ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಬೇಕು. ಸ್ವತಃ ಕರೆ ಮಾಡಿ ತನ್ನ ವಿವಾಹ ತಪ್ಪಿಸುವಂತೆ ಅಧಿಕಾರಿಗಳನ್ನು ಕೋರಿದ್ದ ಜಿಲ್ಲೆಯ ಬಾಲಕಿಯರನ್ನು ಕರೆಸಿ ಸನ್ಮಾನಿಸಿ ಆರ್ಥಿಕ ಸಹಾಯ ಮಾಡಬೇಕು. ಇದರಿಂದ ಬೇರೆಯವರಿಗೂ ಅನುಕೂಲವಾಗಲಿದೆ ಎಂದು ಹೆಬ್ಬಾಳಕರ್, ಎಲ್ಲ ಇಲಾಖೆಗಳು ಕೈಜೋಡಿಸಿದಾಗ ಬಾಲ್ಯವಿವಾಹವೆಂಬ ಅನಿಷ್ಠ ಪದ್ಧತಿ ತಡೆಯಲು ಸಾಧ್ಯ. ಜಾಗೃತಿ ಜತೆಗೆ ಕಠಿಣ ಕ್ರಮದ ಮೂಲಕ ಭಯ ಹುಟ್ಟಿಸಿದರೆ ಸಂಪೂರ್ಣ ಹೋಗಲಾಡಿಸಬಹುದು ಎಂದರು.

ಕೇಂದ್ರ ಹಾಗೂ ರಾಜ್ಯದಿಂದ ಕಾಲಕಾಲಕ್ಕೆ ನೀಡುವ ಗುರಿಯನ್ನು ತಲುಪಲೇಬೇಕು. ಇಲಾಖೆ ಯೋಜನೆ ಅನುಷ್ಠಾನದಲ್ಲಿ ಹಿಂದೆ ಬಿದ್ದಲ್ಲಿ ಅಧಿಕಾರಿ, ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಬೀದರ್ ಜಿಲ್ಲೆಯಲ್ಲಿ ೧೦ ಮಹಿಳಾ ಪೊಲೀಸ್ ತಂಡದಿಂದ ಅಕ್ಕ ಪಡೆ ರಚಿಸಿ ಶಾಲಾ-ಕಾಲೇಜು, ಗಾರ್ಡನ್, ಹಾಸ್ಟೆಲ್ ಮೊದಲಾದ ಕಡೆ ನಿರಂತರ ನಿಗಾ ವಹಿಸುವ ಮೂಲಕ ಹೆಣ್ಣು ಮಕ್ಕಳಿಗೆ ವಿಶೇಷ ರಕ್ಷಣೆ ನೀಡುತ್ತಿರುವ ಬಗ್ಗೆ ಮಾಹಿತಿ ಪಡೆದ ಸಚಿವರು, ಈ ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇಲಾಖೆ ಕಾರ್ಯದರ್ಶಿ ಡಾ.ಶಾಮ್ಲಾ ಇಕ್ಬಾಲ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಇಲಾಖೆ ನಿರ್ದೇಶಕ ರಾಘವೇಂದ್ರ, ಜಂಟಿ ಕಾರ್ಯದರ್ಶಿ ಬಿ.ಎಚ್. ನಿಶ್ಚಲ್, ಅಂಗವಿಕಲರ ಹಕ್ಕುಗಳ ಅಧಿನಿಯಮ ರಾಜ್ಯ ಆಯುಕ್ತ ದಾಸ್ ಸೂರ್ಯವಂಶಿ ಇತರರಿದ್ದರು.

ರು.೧೦ ಸಾವಿರ ಕೋಟಿ: ಕಲಬುರಗಿ ವಿಭಾಗಕ್ಕೆ ಗೃಹಲಕ್ಷ್ಮಿ ಯೋಜನೆಯಡಿ ಈವರೆಗೆ ೧೦ ಸಾವಿರ ಕೋಟಿ ರೂ. ಬಂದಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಗ್ಯಾರಂಟಿ ಯೋಜನೆಯಿಂದ ಅರ್ಹರನ್ನು ಕೈಬಿಡದಂತೆ ನೋಡಿಕೊಳ್ಳಬೇಕು. ಗೃಹಲಕ್ಷ್ಮಿ ಹಣದಿಂದ ಮಹಿಳೆಯರು ಸಾಕಷ್ಟು ಕಾರ್ಯಕ್ರಮ ಮಾಡುತ್ತಿದ್ದಾರೆ. ಅವುಗಳ ಪ್ರಚಾರ ಮಾಡುವುದರಿಂದ ಇತರರಿಗೂ ಲಾಭವಾಗುತ್ತದೆ. ಗೃಹಲಕ್ಷ್ಮಿ ಸಂಘಗಳ ಮೂಲಕ ಇನ್ನೂ ಹೆಚ್ಚಿನ ಪ್ರಯೋಜನವಾಗುವಂತೆ ಹೇಗೆ ಮಾಡಬಹುದು ಎಂಬ ಚಿಂತನೆ ಮಾಡುತ್ತಿರುವುದಾಗಿ ತಿಳಿಸಿದರು.

ಅಂಗನವಾಡಿ ಕಟ್ಟಡಗಳ ದುರಸ್ತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಡಿಸಿ, ಜಿಪಂ ಸಿಇಒ ಅಂಗನವಾಡಿ ಕೇಂದ್ರಗಳಿಗೆ ಆಗಾಗ್ಗೆ ಭೇಟಿ ನೀಡಬೇಕು. ಎಲ್ಲ ಇಲಾಖೆ ಅಧಿಕಾರಿಗಳು ಸಾಮಾಜಿಕ ಜವಾಬ್ದಾರಿಯಿಂದ ಕೆಲಸ ಮಾಡಿ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು. ಆಗಲೇ ಸರ್ಕಾರಕ್ಕೂ ಒಳ್ಳೆಯ ಹೆಸರು ಬರುತ್ತದೆ ಮತ್ತು ಸಮಾಜಕ್ಕೂ ಸಹಾಯವಾಗುತ್ತದೆ.

| ಲಕ್ಷ್ಮೀ ಹೆಬ್ಬಾಳಕರ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ

ವಿವಿಧ ಯೋಜನೆ ಪರಿಣಾಮಕಾರಿ ಜಾರಿಗೊಳಿಸಿ:  ಎರಡು ದಿನ ಇಲಾಖೆ ಪ್ರಗತಿ ಪರಿಶೀಲನೆ ನಡೆಸಲಾಗಿದೆ. ಮಕ್ಕಳು, ಮಹಿಳೆಯರು, ಗರ್ಭೀಣಿಯರು, ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗೆ ಸರ್ಕಾರ ಅನುಷ್ಠಾನಗೊಳಿಸಿದ ವಿವಿಧ ಯೋಜನೆಗಳ ಪರಿಣಾಮಕಾರಿ ಜಾರಿಗೊಳಿಸಲು ನಿರ್ದೇಶನ ನೀಡಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ನಗರ ಮತ್ತು ಗ್ರಾಮೀಣ ಪ್ರದೇಶದ ಕ್ಷೇತ್ರ ಮಟ್ಟದಲ್ಲಿ ಯೋಜನೆಗಳ ಬಗ್ಗೆ ಹೆಚ್ಚು ಪ್ರಚಾರ ಕೈಗೊಂಡು ಸಮಸ್ಯೆ ಬಗೆಹರಿಸಿ ಕಾಲಕಾಲಕ್ಕೆ ನೀಡುವ ಗುರಿ ತಲುಪಿಸಬೇಕಿದೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಂಗನವಾಡಿ ಸಹಾಯಕಿಯರ ನೇಮಕಾತಿ ಸರಳ ಮತ್ತು ಪಾರದರ್ಶಕವಾಗಿಸಿ ೯೦ ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಭಾಗ್ಯಲಕ್ಷ್ಮಿ ಅಡಿ ಹೆಣ್ಣು ಮಕ್ಕಳಿಗೆ ಬಾಂಡ್ ವಿತರಿಸಲಾಗುತ್ತಿದೆ. ಈ ಪೈಕಿ ೨೦ ಸಾವಿರ ಜನರ ವಿಳಾಸ ಸರಿಯಾಗಿ ಸಿಗುತ್ತಿಲ್ಲ. ಅವರ ಪಾಲಕರನ್ನು ಸಂಪರ್ಕಿಸಿ ಪಡೆಯಬಹುದು ಎಂದರು. ಅಂಗವಿಕಲರ ಯುಡಿಐ ಕಾರ್ಡ್ ವಿತರಣೆಯಲ್ಲಿರುವ ಸಮಸ್ಯೆಯನ್ನು ಶೀಘ್ರ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಮಕ್ಕಳ ಹಾಗೂ ಮಹಿಳೆಯರ ಕಳ್ಳ ಸಾಗಣೆ ಕುರಿತು ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಅಪೌಷ್ಟಿಕ ನಿವಾರಣೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೀದರ್ ಜಿಲ್ಲೆಯಲ್ಲಿ ಮೊಟ್ಟೆ ವಿತರಣೆ ಸಮಸ್ಯೆ ಕುರಿತು ಗಮನಕ್ಕೆ ಬಂದಿದ್ದು, ರಾಜ್ಯದ ಇತರ ಜಿಲ್ಲೆಗಳಂತೆ ಬಾಲವಿಕಾಸ ಸಮಿತಿಗೆ ಮೊಟ್ಟೆ ಅನುದಾನ ಸಂದಾಯವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net