

ಮೈಸೂರು: ಮಹಿಳೆಯು ಸ್ನೇಹಿತೆ, ತತ್ವದರ್ಶಿ ಮತ್ತು ಮಾರ್ಗದರ್ಶಿ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ (ಸಿಪಿಕೆ) ಬಣ್ಣಿಸಿದರು.
ಶ್ರೀ ಶಿವರಾತ್ರೀಶ್ವರ ಮಹಿಳಾ ಸಮಾಜ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಹಾಸ್ಟೆಲ್‌ನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎಂಬ ಮಾತಿದೆ. ಆದರೆ, ಪುರುಷನ ಹಿಂದೆಯಲ್ಲ, ಅವರ ಮುಂದೆ. ಜತೆ ಜತೆಯಲ್ಲೇ ಅವನನ್ನು ಮುನ್ನೆಡೆಸುತ್ತಾಳೆ. ಹೀಗಾಗಿ, ಹೆಣ್ಣು ಲೋಕದ ಕಣ್ಣು. ಸ್ತ್ರೀಯರ ಕುರಿತು ತಿರಸ್ಕಾರ ಭಾವ ಬೇಡ. ಇದು ಈಗಲೂ ಕೆಲ ಕಡೆ ಉಳಿದುಕೊಂಡಿದೆ. ಹೆಣ್ಣು ನಮ್ಮ ತಾಯಿಯಷ್ಟೇ ಅಲ್ಲ, ಜೀವತಾಯಿ ಅವಳು ಎಂದು ವರ್ಣಿಸಿದರು.
ಮಹಿಳೆ ಈಗ ಅಬಲೆಯಲ್ಲ, ಅವಳು ಸಬಲೆ. ಎತ್ತರದ ಹಿಮಾಲಯ ಪರ್ವತವನ್ನು ಹತ್ತಿಬಂದ ಮಹಿಳೆಯರಿದ್ದಾರೆ. ಪುರುಷರಿಗೆ ಸರಿಸಮಾನವಾಗಿ ಸಾಧನೆ ಮಾಡಿದವರೂ ಇದ್ದಾರೆ. ಅನೇಕ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾಳೆ. ಗಾಂಧಿಗಿರಿ, ಕ್ರಾಂತಿಗಳೆರಡು ಅವಳಿಂದ ಆಗಿದೆ. ‘ಹೆಣ್ಣು ರಕ್ಕಸಿಯಲ್ಲ, ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧ ಮಲ್ಲಿಕಾರ್ಜುನ ನೋಡಾ’ ಎಂದು ವಚನಕಾರ ಸಿದ್ಧರಾಮೇಶ್ವರ ಹೇಳುವ ಮೂಲಕ ಹೆಣ್ಣನ್ನು ಸಾಕ್ಷಾತ್ ದೇವರು ಎಂದು ಬಣ್ಣಿಸಿದ್ದಾರೆ ಎಂದು ವಚನದೊಂದಿಗೆ ವಿಶ್ಲೇಷಿಸಿದರು.
ಹೊನ್ನು ಮಾಯೆಯಲ್ಲ. ಮಣ್ಣು ಮಾಯೆಯಲ್ಲ. ಮನದ ಮುಂದಣ ಆಶೆಯೇ ಮಾಯೆ ಕಾಣಾ ಗುಹೇಶ್ವರ! ಎಂದು ಅಲ್ಲಮ 12ನೇ ಶತಮಾನದಲ್ಲೇ ಹೇಳಿದ್ದಾರೆ. ಮನದೊಳಗಿನ ಮನಸ್ಸಿನ ಶುದ್ಧಿ ಮಾಡಿಕೊಳ್ಳಿ. ಅದನ್ನು ಬಿಟ್ಟು ಮಹಿಳೆಯರ ಮೇಲೆ ದೂರ ಬೇಡಿ ಎಂದಿದ್ದಾರೆ ಎಂದು ಹೇಳಿದರು.
ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ, ಮಾಜಿ ಎಂಎಲ್ಸಿ ತೋಂಟದಾರ್ಯ, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಚುಟುಕು ಸಾಹಿತಿ ಡಾ.ಎಂ.ಜಿ.ಆರ್. ಅರಸ್, ಮಹಿಳಾ ಸಮಾಜದ ಡಾ.ರತ್ನಾ ಹಾಲಪ್ಪಗೌಡ, ಮಮತಾ ಸುರೇಶ್ ಇದ್ದರು.