ಸ್ತ್ರೀ ಸಮಾನತೆಯಲ್ಲಿ ದೇಶದ ಪ್ರಗತಿ

oplus_0
 ಬಸವಕಲ್ಯಾಣದ ಬಸವ ಮಹಾಮನೆ ಪರಿಸರದಲ್ಲಿ ಶನಿವಾರ ಆಯೋಜಿಸಿದ್ದ ಮಹಿಳಾ ವಿಚಾರ ಗೋಷ್ಠಿಯನ್ನು ಹುಲಸೂರು ತಹಸೀಲ್ದಾರ್ ಶಿವಾನಂದ ಮೇತ್ರೆ ಉದ್ಘಾಟಿಸಿದರು. ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಮಂಗಲಾ ಭಾಗವತ್, ಜ್ಯೋತಿ ಲಿಂಗಂಪಲ್ಲಿ, ಪಂಡಿತ ನಾಗರಾಳೆ, ಗುರುನಾಥ ಗಡ್ಡೆ, ಪ್ರವೀಣಕುಮಾರ, ಶ್ರೀಕಾಂತ, ರವೀಂದ್ರ ಇತರರಿದ್ದರು.
Published on

ಬಸವಕಲ್ಯಾಣ: ಮಹಿಳಾ ಸಮಾನತೆಯಲ್ಲಿ ಸಮಾಜದ, ದೇಶದ ಪ್ರಗತಿ ಅಡಗಿದೆ ಎಂದು ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ಗನಲಿಂಗ ರುದ್ರಮುನಿ ಶಿವಾಚಾರ್ಯರು ನುಡಿದರು.

ನಗರದ ಬಸವ ಮಹಾಮನೆ ಪರಿಸರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್​ನಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ, ವರಮಹಾಲಕ್ಷ್ಮೀ ಪೂಜೆ ಮತ್ತು ವಿಶ್ವ ಜಲದಿನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ದೇಶದ ಸರ್ವಾಂಗೀಣ ಪ್ರಗತಿಗೆ ಲಿಂಗ ಸಮಾನತೆ ಅವಶ್ಯಕ. ಮಹಿಳೆಯರು ಸಮಾನತೆ ಸಾಧಿಸಿ, ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರಬೇಕಿದೆ. ಈ ನಿಟ್ಟಿನಲ್ಲಿ ಅವಕಾಶಗಳನ್ನು ಕಲ್ಪಿಸಿ ಕೊಡುವಲ್ಲಿ ಸಮಾಜ ಮತ್ತು ಸರ್ಕಾರ ಕಾಳಜಿ ವಹಿಸಬೇಕಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಹುಲಸೂರು ತಹಸೀಲ್ದಾರ್ ಶಿವಾನಂದ ಮೇತ್ರೆ ಮಾತನಾಡಿ, ಮಹಿಳೆಯರು ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ, ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ಅದ್ಭುತ ಸಾಧನೆ ಮಾಡಿ ವಿಶ್ವದ ಗಮನ ಸೆಳೆಯುತ್ತಿದ್ದಾರೆ. ಸರ್ಕಾರದ ಸೌಲಭ್ಯ ಮತ್ತು ಅವಕಾಶಗಳನ್ನು ಸದುಪಯೋಗ ಪಡೆಸಿಕೊಂಡು ಮಹಿಳೆರು ಪ್ರಗತಿ ಸಾಧಿಸಬೇಕು ಎಂದು ಸಲಹೆ ನೀಡಿದರು.

ಯೋಜನೆ ಜಿಲ್ಲಾ ನಿರ್ದೇಶಕ ಪ್ರವೀಣಕುಮಾರ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಸಮಾಜಮುಖಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಮಹಿಳಾ ಸಂಘಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗುತ್ತಿದೆ. ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಲೋಕಸಭಾ ಕ್ಷೇತ್ರದ ಅನುದಾನದಲ್ಲಿ ೫ ಕೋಟಿ ರೂ. ಅನುದಾನದ ಜತೆಗೆ ಈ ಸಂಸ್ಥೆಯ ೨.೫ ಕೋಟಿ ರೂ. ಅನುದಾನದಲ್ಲಿ ಬೀದರ್ ಜಿಲ್ಲೆಯ ಹೈನುಗಾರಿಕೆ ಅಭಿವೃದ್ಧಿಗೆ ಬಳಸಲಾಗುತ್ತಿದೆ ಎಂದು ಹೇಳಿದರು.

ಮಹಿಳೆಯರ ಸಂಸ್ಕಾರ ಮತ್ತು ಸಬಲೀಕರಣ ಕುರಿತು ಬೀದರ್ ಅಂಚೆ ಕಚೇರಿ ಸಂಪರ್ಕ ಅಧಿಕಾರಿ ಮಂಗಲಾ ಭಾಗವತ್, ಮಹಿಳಾ ಪರ ಕಾನೂನು ವಿಷಯ ಕುರಿತು ನ್ಯಾಯವಾದಿ ಪಂಡಿತ ನಾಗರಾಳೆ, ಮಹಿಳೆಯರ ಶಿಕ್ಷಣ ಕುರಿತು ಕಲಬುರಗಿಯ ಲೇಖಕಿ ಜ್ಯೋತಿ ಲಿಂಗಂಪಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಜಿಲ್ಲಾ ಜನ ಜಾಗೃತಿ ವೇದಿಕೆ ಉಪಾದ್ಯಕ್ಷ ಗುರುನಾಥ ಗಡ್ಡೆ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಯೋಜನಾಧಿಕಾರಿ ಶ್ರೀಕಾಂತ ಸ್ವಾಗತಿಸಿದರು. ಕ್ಷೇತ್ರ ಯೋಜನಾಧಿಕಾರಿ ರವೀಂದ್ರ ನಿರೂಪಣೆ ಮಾಡಿದರು. ಹೆಚ್ಚಿನ ವ್ಯವಹಾರ ಮಾಡಿದಕ್ಕಾಗಿ ಮುಡಬಿ ವಲಯದ ಸಂಘಕ್ಕೆ ಪ್ರಥಮ ಬಹುಮಾನ ೬೪೦೦೦ರೂ ಲಾಭಂಶ ನೀಡಲಾಯಿತು. ದ್ವೀತಿಯ ಬಹುಮಾನ ಮಂಠಾಳ ವಲಯಕ್ಕೆ ೪೦೦೦೦ರೂ ಲಾಭಾಂಶ ನೀಡಲಾಯಿತು.

ಆದಿ, ಅನಾದಿಕಾಲದಿಂದಲೂ ಭಾರತಿಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಪೂಜ್ಯನೀಯ ಹಾಗೂ ಗೌರವದ ಸ್ಥಾನ ನೀಡಲಾಗಿದೆ. ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ಸ್ತ್ರೀ ಸಮಾನತೆ ಮತ್ತು ಸ್ವಾತಂತ್ರ ಕಲ್ಪಿಸಿದ್ದರು. ಸಮಾಜದಲ್ಲಿ ಮಹಿಳೆಯ ಪ್ರಗತಿಗೆ ಸಹಕರಿಸುವ ಜತೆಗೆ ಅವರನ್ನು ಗೌರವದಿಂದ ನೋಡುವ ಮನೋಭಾವ ಸಮಾಜದ ಎಲ್ಲರಲ್ಲಿಯೂ ಬೆಳೆಯಬೇಕು. ಮಹಿಳೆಯ ಹಕ್ಕು ರಕ್ಷಣೆಗಾಗಿ ಇರುವ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು.

| ಪಂಡಿತ ನಾಗರಾಳೆ ನ್ಯಾಯವಾದಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net