ಸ್ತ್ರೀ ಸಮಾನತೆಗೆ ಬುನಾದಿ ಹಾಕಿದ ಬಸವಣ್ಣ

23 HANUR 1.
Published on

ಹನೂರು: ಶ್ರೀ ಬಸವೇಶ್ವರರು 12ನೇ ಶತಮಾನದಲ್ಲಿಯೇ ಸ್ತ್ರೀಯರಿಗೆ ಸಮಾನತೆಯನ್ನು ನೀಡಬೇಕೆಂದು ಬುನಾದಿ ಹಾಕಿದ ಮೊದಲ ಸಮಾಜ ಸುಧಾರಕ. ಹಾಗಾಗಿ ಇವರ ದೂರದೃಷ್ಟಿ ಮೆಚ್ಚುವಂತಹದ್ದು ಎಂದು ಗ್ರೇಡ್- 2 ತಹಸೀಲ್ದಾರ್ ಧನಂಜಯ ತಿಳಿಸಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿಗೃಹದ ಸಭಾಂಗಣದಲ್ಲಿ ಭಾನುವಾರ ಕಂದಾಯ ಇಲಾಖೆ ವತಿಯಿಂದ ಆಯೋಜಿಸಿದ್ದ ಬಸವ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಬಸವಣ್ಣನ ಸಮಾಜದಲ್ಲಿನ ಅಸಮಾನತೆಯನ್ನು ತೊಡೆದು ಹಾಕಲು ವರ್ಣಭೇದ ನೀತಿಯ ವಿರುದ್ಧ ಹೋರಾಡಿದ ಸಾಮಾಜಿಕ ಹೋರಾಟಗಾರ. ಸಮಾಜಕ್ಕೆ ಇವರ ಕೊಡುಗೆ ಅಪಾರ. ಇವರು 12ನೇ ಶತಮಾನದಲ್ಲಿಯೇ ಅನುಭವ ಮಂಟಪವನ್ನು ಸ್ಥಾಪಿಸಿ ವಚನಗಳನ್ನು ರಚಿಸುವುದರ ಮೂಲಕ ಸಮಾನತೆಯನ್ನು ತರಲು ಶ್ರಮಿಸಿದ ವಚನಕಾರ. ಇವರ ವಚನಗಳು ಉತ್ತಮ ಸಮಾಜಕ್ಕೆ ಇಂದಿಗೂ ಸ್ಫೂರ್ತಿದಾಯಕವಾಗಿದೆ. ಅಲ್ಲದೆ ಅಂದಿನ ಕಾಲಘಟ್ಟದಲ್ಲೇ ಸ್ತ್ರೀಯರ ಸಮಾನತೆಗೆ ಆದ್ಯತೆ ನೀಡಿದ್ದರು. ಜತೆಗೆ ಕಾಯಕವೇ ಕೈಲಾಸ ಎಂಬ ತತ್ವವನ್ನು ಪ್ರತಿಪಾದಿಸುವುದರ ಮೂಲಕ ಜನರಲ್ಲಿ ಕಾಯಕದ ಮಹತ್ವವನ್ನು ತಿಳಿಸಿಕೊಟ್ಟ ತತ್ವಜ್ಞಾನಿ. ಈ ತತ್ವದಿಂದ ಜನರಲ್ಲಿ ದುಡಿಮೆಯ ಪ್ರವೃತ್ತಿಯನ್ನು ಬೆಳೆಸುವುದರ ಮೂಲಕ ವಿಶ್ವಗುರು ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಇವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಉತ್ತಮ ಸಮಾಜಕ್ಕೆ ಮಾದರಿಯಾಗಬೇಕು ಎಂದು ತಿಳಿಸಿದರು.

ತಾಪಂ ಇಒ ಶ್ರೀನಿವಾಸ್, ಶಿರಸ್ತೇದಾರ್ ನಾಗೇಂದ್ರ, ಆರ್‌ಐ ಮಹದೇವಸ್ವಾಮಿ, ಗ್ರಾಮ ಆಡಳಿತ ಅಧಿಕಾರಿ ಶೇಷಣ್ಣ ಹಾಗೂ ಇಲಾಖೆಯ ನೌಕರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net