ಸ್ತ್ರೀ ಸಮಾಜದ ದೊಡ್ಡ ಶಕ್ತಿ

11ard03 aurad mahila dinacharane jpg
ಔರಾದ್ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ ಉದ್ಘಾಟಿಸಿದರು. ಪ್ರೋ.ಅಂಬಿಕಾದೇವಿ, ಮಹ್ಮದ್ ಸಿರಾಜ್, ಮೀನಾಕ್ಷಿ ಪಾಂಚಾಳ, ಆರತಿ ಪಾಟೀಲ್, ಮಂಗಲ ಭಾಗವತ, ಸಂಗೀತಾ, ದೇವಿಕಾ, ಸುರೇಖಾ, ಇತರರಿದ್ದರು.
Published on

ಔರಾದ್: ಇಂದು ಮಹಿಳೆ ಎಲ್ಲ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ಸ್ತ್ರೀ ಸಮಾಜದ ದೊಡ್ಡ ಶಕ್ತಿ ಎಂದು ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ ಹೇಳಿದರು.

ಪಟ್ಟಣದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಬೀದರ್ ಎಕ್ಸೆಸ್ ಲೈವ್ಲೀಹೂಡ್ಸ-ಡಿಜಿಟಲ್ ಸಖಿ ಯೋಜನೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ ತಂತ್ರಜ್ಞಾನ, ಆರ್ಥಿಕ, ರಾಜಕೀಯ, ರಕ್ಷಣೆ ಸೇರಿ ಪ್ರತಿಯೊಂದು ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅವರ ಕೊಡುಗೆಯನ್ನು ಮೀಸಲಿರಿಸಲು ಈ ದಿನ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯೆ ಪ್ರೋ.ಅಂಬಿಕಾದೇವಿ ಮಾತನಾಡಿ, ವಿಶ್ವ ಮಹಿಳಾ ದಿನಾಚರಣೆ ಕೇವಲ ಮಾರ್ಚ್ ತಿಂಗಳಿಗೆ ಮೀಸಲಾಗದೆ ನಿತ್ಯವೂ ಮಹಿಳೆಯರನ್ನು ಹಾಗೂ ಅವರ ಸಾಧನೆಗಳನ್ನು ಸ್ಮರಿಸಬೇಕು. ಸಮಾಜದಲ್ಲಿ ಅವರಿಗೆ ನೀಡುವ ಸ್ಥಾನಮಾನ, ಗೌರವ, ಹಕ್ಕು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ದೊರೆಯಬೇಕು ಎಂದರು.

ಬೀದರ್ ಅಂಚೆ ಇಲಾಖೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಗಲಾ ಭಾಗವತ ಮಾತನಾಡಿ, ತೊಟ್ಟಿಲನ್ನು ತೂಗುವ ಕೈ ಜಗತ್ತನ್ನು ಆಳುತ್ತದೆ ಅನ್ನುವ ಗಾದೆ ಮಾತಿಗೆ ಇಂದಿನ ನಾರಿಯರೇ ಪ್ರಸ್ತುತ ಉದಾಹರಣೆಯಾಗಿದ್ದಾರೆ. ಮಹಿಳೆಯರು ಮನೆಯ ಜವಾಬ್ದಾರಿಯಿಂದ ಹಿಡಿದು ರಾಷ್ಟ್ರದ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದು ಹೇಳಿದರು.

ಯೋಜನಾ ವ್ಯವಸ್ಥಾಪಕ ಮಹ್ಮದ್ ಸಿರಾಜ್, ಮೀನಾಕ್ಷಿ ಪಾಂಚಾಳ, ಸಹಾಯಕ ಕೃಷಿ ನಿರ್ದೇಶಕಿ ಆರತಿ ಪಾಟೀಲ್, ಕಾರ್ಯಕ್ರಮದ ಸಂಯೋಜಕಿ ಸುರೇಖಾ, ಅಮರ ಸ್ವಾಮಿ ಇತರರಿದ್ದರು. ಡಿಜಿಟಲ್ ಸಖಿ ಸಂಗೀತಾ ಹಾಲಹಳ್ಳಿ ಸ್ವಾಗತಿಸಿದರು. ದೇವಿಕಾ ವಂದಿಸಿದರು. ರೂತಮ್ಮ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net