

ವಿಜಯವಾಣಿ ವಿಶೇಷ ಬೀದರ್
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಮಹಿಳಾ ಕಾಯಕೋತ್ಸವ ಅಭಿಯಾನ ಹಮ್ಮಿಕೊಂಡಿದೆ.
ನರೇಗಾದಡಿ ಪುರುಷ ಹಾಗೂ ಮಹಿಳೆಯರಿಗೆ ಸಮಾನ ಕೂಲಿ ಇದೆ. ಆದರೂ ರಾಜ್ಯದಲ್ಲಿ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣ ಶೇ.49 ಮಾತ್ರ ಇದೆ. ದಕ್ಷಿಣ ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ಈ ಪ್ರಮಾಣ ತೀರ ಕಡಿಮೆ. ಇದನ್ನು ಹೆಚ್ಚಿಸುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾಯಕೋತ್ಸವ ಯೋಜನೆ ರೂಪಿಸಿದೆ.
ಬೆಳಗಾವಿ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಹಿಳಾ ಕೂಲಿ ಕಾರ್ಮಿಕರು ನರೇಗಾದಡಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದನ್ನು ಹೊರತುಪಡಿಸಿ ಬೀದರ್ ಸೇರಿ ಇತರ ಬಹುತೇಕ ಜಿಲ್ಲೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣ ಕಡಿಮೆ. ಈ ಪ್ರಮಾಣ ಹೆಚ್ಚಳಕ್ಕಾಗಿ ಜ.15ರಿಂದ ಮಾರ್ಚ್ 15ರವರೆಗೆ ಮಹಿಳಾ ಕಾಯಕೋತ್ಸವ ಹಮ್ಮಿಕೊಳ್ಳಲಾಗಿದೆ. ಇದರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತರು ರಾಜ್ಯದ ಎಲ್ಲ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.
ಮಹಿಳೆಯರ ಭಾಗವಹಿಸುವಿಕೆ ಅತಿ ಕಮ್ಮಿ ಇರುವ ತಾಲೂಕಿನ 4 ಗ್ರಾಪಂಗಳನ್ನು ಮೊದಲ ತಿಂಗಳಲ್ಲಿ ಹಾಗೂ 6 ಗ್ರಾಪಂಗಳನ್ನು ಎರಡನೇ ತಿಂಗಳಲ್ಲಿ ಕಾಯಕೋತ್ಸವ ಆಯೋಜಿಸಲು ಆಯ್ಕೆ ಮಾಡಬೇಕು. ಇದು ಅನುಷ್ಠಾನಗೊಳಿಸಲು ತಾಲೂಕು ಮಟ್ಟದಲ್ಲಿ ಎರಡು ಟಾಸ್ಕ್ ಪೋಸ್೯ ರಚಿಸಬೇಕು. ಪ್ರತಿ ಟಾಸ್ಕ್ ಫೋರ್ಸ್ ಮೊದಲ ತಿಂಗಳಲ್ಲಿ ತಲಾ 2 ಹಾಗೂ ಎರಡನೇ ತಿಂಗಳು ತಲಾ 3 ಗ್ರಾಪಂಗಳಲ್ಲಿ ಕಾಯಕೋತ್ಸವ ಅನುಷ್ಠಾನಗೊಳಿಸುವ ಜವಾಬ್ದಾರಿ ಹೊಂದಿದೆ ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಕಾಮಗಾರಿ ನಡೆಯುವ
ಸ್ಥಳದಲ್ಲಿ ಮಕ್ಕಳ ಸಂರಕ್ಷಣೆ
ಮಹಿಳಾ ಕಾರ್ಮಿಕರು ಕೆಲಸ ಮಾಡುವ ಸ್ಥಳದಲ್ಲಿ ಅವರ ಮಕ್ಕಳನ್ನು ನೋಡಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಕಾಮಗಾರಿ ಸ್ಥಳದಲ್ಲಿ 5 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ನೋಡಿಕೊಳ್ಳಲಾಗುತ್ತಿದೆ. ತೋಟಗಾರಿಕೆ, ಅರಣ್ಯೀಕರಣ, ರೇಷ್ಮೆ ಕಾಮಗಾರಿಗೆ ಗುಂಡಿ ತೆಗೆಯುವುದು, ಬದು ನಿರ್ಮಾಣ, ಕೃಷಿ ಹೊಂಡ, ಮೀನಿನ ಹೊಂಡ, ಭೂ ಅಭಿವೃದ್ಧಿ ಚಟುವಟಿಕೆ, ಕೆರೆ ಹೊಳೆತ್ತುವಿಕೆ, ನೀರಿನ ಸಂರಕ್ಷಣೆ, ವೈಯಕ್ತಿಕವಾಗಿ ದನ, ಕುರಿ, ಮೇಕೆ, ಹಂದಿ, ಕೋಳಿ ಸಾಕಣೆ ಶೆಡ್ ಕಾಮಗಾರಿಗಳನ್ನು ತೆಗೆದುಕೊಳ್ಳಬಹುದು. ದಿನಕ್ಕೆ ಗಂಡು, ಹೆಣ್ಣಿಗೆ 275 ರೂ. ಸಮಾನ ಕೂಲಿ ನೀಡಲಾಗುತ್ತಿದೆ.
ಕಾಯಕೋತ್ಸವ ಉದ್ದೇಶವೇನು?
ನರೇಗಾ ಯೋಜನೆಯಡಿ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣ ಕನಿಷ್ಠ ಶೇ.5ರಷ್ಟು ಹೆಚ್ಚಿಸುವ ಹಾಗೂ ಮಹಿಳಾ ಪ್ರಧಾನದ ಕುಟುಂಬ ಗುರುತಿಸುವುದು, ಕಾಮಗಾರಿ ಸ್ಥಳಗಳನ್ನು ಮಹಿಳೆ ಮತ್ತು ಮಕ್ಕಳ ಸ್ನೇಹಿಯನ್ನಾಗಿ ಮಾಡುವುದು, ನರೇಗಾದಲ್ಲಿ ಸ್ವಸಹಾಯ ಸಂಘಗಳ ಭಾಗವಹಿಸುವಿಕೆಗೆ ಉತ್ತೇಜನ ನೀಡಿಕೆ ಹಾಗೂ ಮಹಿಳಾ ಕಾಯಕ ಬಂಧುಗಳಿಗೆ ತರಬೇತಿ ನೀಡುವುದು ಅಭಿಯಾನದ ಉದ್ದೇಶ. ಅಭಿಯಾನ ನಿಮಿತ್ತ ಜಿಪಂ ಸಿಇಒಗೆ ವಿವಿಧ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಕಾಯಕೋತ್ಸವ ಆಯೋಜಿಸಲು ತಾಲೂಕುವಾರು ಗ್ರಾಪಂಗಳನ್ನು ಆಯ್ಕೆ ಮಾಡಬೇಕು. ಆಯ್ಕೆ ಮಾಡುವ ಪ್ರತಿ ಗ್ರಾಪಂಗೆ ತಲಾ 25 ಸಾವಿರ ರೂ. ಅನುದಾನ ಮುಂಗಡ ಬಿಡುಗಡೆ ಮಾಡಬೇಕು. ಮೇಲ್ವಿಚಾರಣೆ ಮಾಡಲು ತಾಲೂಕಿಗೆ ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿ ಎಂದು ನೇಮಕ ಮಾಡುವ ಜವಾಬ್ದಾರಿ ವಹಿಸಲಾಗಿದೆ.
ಉತ್ತಮ ಕಾರ್ಯನಿರ್ವಹಣೆಗೆ ಪ್ರಶಸ್ತಿ
ಕಾಯಕೋತ್ಸವದಲ್ಲಿ ಉತ್ತಮ ಕಾರ್ಯನಿರ್ವಹಣೆ ತೋರುವ ಅಧಿಕಾರಿಗಳಿಗೆ ಬಹುಮಾನ ವಿತರಿಸಿ ಪ್ರೋತ್ಸಾಹಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಪ್ರತಿ ಜಿಲ್ಲೆಯಲ್ಲಿ ಕಾಯಕೋತ್ಸವದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಅಧಿಕಾರಿ, ಸಿಬ್ಬಂದಿಗೆ (ಕಾರ್ಯನಿವಾಹಕ ಅಧಿಕಾರಿ, ಸಹಾಯಕ ನಿರ್ದೇಶಕರು, ಐಇಸಿ ಸಂಯೋಜಕರು, ಸಾಮಾಜಿಕ ಪರಿಶೋಧನೆ ಸಂಯೋಜಕರು ಮತ್ತು ಗ್ರಾಮ ಸಂಪನ್ಮೂಲ ವ್ಯಕ್ತಿಗಳು, ಬಿಎಫ್ ಟಿ ಕಾಯಕ ಬಂಧು ಇತ್ಯಾದಿ) ಜಿಲ್ಲಾ ಮಟ್ಟದಲ್ಲಿ ಬಹುಮಾನ ವಿತರಿಸಲು ಸಿಇಒ ಕ್ರಮ ವಹಿಸಬೇಕು. ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಿಇಒ, ಉಪ ಕಾರ್ಯದರ್ಶಿ/ಯೋಜನಾ ನಿರ್ದೇಶಕರು, ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಐಇಸಿ ಸಂಯೋಜಕರಿಗೆ ಬಹುಮಾನ ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಬೀದರ್ ಜಿಲ್ಲೆಯ 8 ತಾಲೂಕುಗಳಲ್ಲಿ ಮೊದಲ ಹಂತದಲ್ಲಿ ತಲಾ 4 ಗ್ರಾಪಂ ಆಯ್ಕೆ ಮಾಡಲಾಗಿದೆ. ಮಹಿಳೆಯರು ಹೆಚ್ಚು ಪ್ರಮಾಣದಲ್ಲಿ ನರೇಗಾದಡಿ ಕೆಲಸಕ್ಕೆ ಬರುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ದಿಸೆಯಲ್ಲಿ ವಿವಿಧ ತಾಲೂಕಿನಲ್ಲಿ ರಚಿಸಿದ ತಂಡಗಳು ಸಕ್ರಿಯ ಕೆಲಸ ಮಾಡುತ್ತಿದ್ದು, ಬರುವ ದಿನಗಳಲ್ಲಿ ಮಹಿಳಾ ಭಾಗವಹಿಸುವಿಕೆ ಹೆಚ್ಚಲಿದೆ.| ಸೂರ್ಯಕಾಂತಜಿಪಂ ಉಪ ಕಾರ್ಯದಶಿ