ಸ್ತ್ರೀ-ಶಕ್ತಿ ಸ್ವಸಹಾಯ ಸಂಘಗಳ ಸಾಲ ಮನ್ನಾ

23M.D.R.3
ಮದ್ದೂರು ತಾಲೂಕಿನ ಬೋರಾಪುರ ಕಾಲನಿಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಶಾಸಕ ಡಿ.ಸಿ.ತಮ್ಮಣ್ಣ ನಿವಾಸಿಗಳಿಂದ ಅಹವಾಲು ಆಲಿಸಿದರು. ಮಾದನಾಯಕನಹಳ್ಳಿ ರಾಜಣ್ಣ, ಚಿಕ್ಕತಿಮ್ಮೇಗೌಡ ಇದ್ದರು.
Published on

ಮದ್ದೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಸ್ವಂತ ಬಲದಲ್ಲಿ ಮುಖ್ಯಮಂತ್ರಿಯಾದರೆ ಸ್ತ್ರೀ-ಶಕ್ತಿ ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡಲಿದ್ದಾರೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳಿದರು.

ತಾಲೂಕಿನ ಬೋರಾಪುರ ಕಾಲನಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಜನರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತರ ಸಾವಿರಾರು ಕೋಟಿ ರೂ. ಸಾಲ ಮನ್ನಾ ಮಾಡುವ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದರು. ಇದೀಗ ಮತ್ತೊಮ್ಮೆ ಮುಖ್ಯಮಂತ್ರಿಯಾದರೆ ಮರುಕ್ಷಣವೇ ರಾಜ್ಯದ ಸ್ತ್ರೀ-ಶಕ್ತಿ ಸ್ವಸಹಾಯ ಸಂಘಗಳ ಸಾವಿರಾರು ಕೋಟಿ ರೂ. ಸಾಲ ಮನ್ನಾ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನೆರೆಯ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿವೆ. ಈ ಹಿನ್ನೆಲೆಯಲ್ಲಿ ಆ ರಾಜ್ಯಗಳಲ್ಲಿ ಅಭಿವೃದ್ಧಿಗೆ ವೇಗ ಸಿಕ್ಕಿದೆ ಹಾಗೂ ಸಮಗ್ರ ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ. ಆದ್ದರಿಂದ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಕರ್ನಾಟಕದಲ್ಲೂ ಪ್ರಾದೇಶಿಕ ಪಕ್ಷ ಜೆಡಿಎಸ್‌ಗೆ ಸ್ವಂತ ಬಲದ ಮೇಲೆ ಅಧಿಕಾರ ನಡೆಸುವ ಶಕ್ತಿಯನ್ನು ಒಂದು ಬಾರಿ ಕೊಟ್ಟಿ ನೋಡಿ ಎಂದು ಮನವಿ ಮಾಡಿದರು.

ಬೋರಾಪುರ ಕಾಲನಿಯಲ್ಲಿ ವಾಸಿಸುತ್ತಿರುವ ಕೂಲಿಕಾರರು ಮತ್ತು ಬಡವರು, ನಮಗೆ ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಾಶನ ಬರುತ್ತಿಲ್ಲ. ನಮಗೆ ಸ್ಥಳಾವಕಾಶವಿದ್ದರೂ ಗ್ರಾಪಂ ವತಿಯಿಂದ ಶೌಚಗೃಹ ನಿರ್ಮಿಸಿಕೊಟ್ಟಿಲ್ಲ. ಕೆಲವರಿಗೆ ಆಧಾರ್ ನೋಂದಣಿಯಾಗಿಲ್ಲ. ಸಮುದಾಯ ಭವನ ಪೂರ್ಣಗೊಂಡಿಲ್ಲ. ಅಂಗನವಾಡಿಗೆ ಕಾಂಪೌಂಡ್ ನಿರ್ಮಿಸಿಕೊಡಿ ಎಂದು ಶಾಸಕರಿಗೆ ಮನವಿ ಸಲ್ಲಿಸಿದರು.

ಇದಕ್ಕೆ ಸ್ಪಂದಿಸಿದ ಶಾಸಕ ಡಿ.ಸಿ.ತಮ್ಮಣ್ಣ, ಸ್ಥಳದಲ್ಲಿದ್ದ ಅಧಿಕಾರಿಗಳನ್ನು ಕರೆದು ಪಿಂಚಣಿ ಅದಾಲತ್ ಮಾಡಿ ಸಾಮಾಜಿಕ ಭದ್ರತಾ ಯೋಜನೆಯಡಿ ಸಿಗುವ ಸವಲತ್ತುಗಳನ್ನು ಸಮರ್ಪಕವಾಗಿ ಇಲ್ಲಿಯ ನಿವಾಸಿಗಳಿಗೆ ಸಿಗುವಂತೆ ಮಾಡಬೇಕು ಎಂದು ತಾಕೀತು ಮಾಡಿದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿಳಿಯಪ್ಪ, ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಮುಖಂಡರಾದ ಮಾದನಾಯಕನಹಳ್ಳಿ ರಾಜಣ್ಣ, ನಗರಕೆರೆ ಸಂದೀಪ್, ಮಲ್ಲರಾಜು, ಶಿವನಂಜಯ್ಯ, ಸುದರ್ಶನ್, ಬಸವರಾಜು, ಎಪಿಎಂಸಿ ಮಾಜಿ ನಿರ್ದೇಶಕ ಶಿವಣ್ಣ, ಮನ್‌ಮುಲ್ ಮಾಜಿ ನಿರ್ದೇಶಕ ಉಮೇಶ್, ಗ್ರಾಪಂ ಉಪಾಧ್ಯಕ್ಷ ಸತೀಶ್, ಸದಸ್ಯ ನಿಂಗರಾಜು ಮುಖಂಡರಾದ ಮಲ್ಲರಾಜು, ಶಿವನಂಜಯ್ಯ, ಸುದರ್ಶನ್, ಬಸವರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net