

ಚಿತ್ರದುರ್ಗ: ಪ್ರತಿ ಮಹಿಳೆಯ ವಿಮೋಚನೆಗೆ ಶಿಕ್ಷಣ ಕೀಲಿ ಕೈಯಾಗಿದೆ ಎಂದು ಸಾರಿದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಮಾತು ಸರ್ವಕಾಲಕ್ಕೂ ಪ್ರಸ್ತುತವೆಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು.
ಕೋಟೆನಾಡು ಬುದ್ದ ವಿಹಾರದಲ್ಲಿ ಭಾನುವಾರ ನಡೆದ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದರು.
ಯೋಗ್ಯನಲ್ಲದ ಪತಿಯೊಂದಿಗೆ ಹಲವರು ಜೀವನ ಸಾಗಿಸುವ ದುಸ್ಥಿತಿ ನಿರ್ಮಾಣ ಆಗಿರುವುದೇ ಶಿಕ್ಷಣದ ಕೊರತೆಯಿಂದ. ಹೀಗಾಗಿ ಸ್ತ್ರೀಯರು ಉತ್ತಮ ಶಿಕ್ಷಣ ಪಡೆದರೆ, ಇತಿಹಾಸದ ಹಾದಿಯನ್ನೇ ಬದಲಿಸಬಹುದೆಂದು ಶತಮಾನಗಳ ಹಿಂದೆಯೇ ಪ್ರತಿಪಾದಿಸಿದ್ದರು. ಅದು ಇಂದಿಗೂ ಸತ್ಯ ಎಂದು ಸ್ಮರಿಸಿಕೊಂಡರು.
ಬಾಲ್ಯವಿವಾಹ, ಸತಿ ಸಹಗಮನ, ಕೇಶ ಮಂಡನೆಯ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿ ದಲಿತರು, ಮಹಿಳೆಯರು, ಆದಿವಾಸಿಗಳು, ಹಿಂದುಳಿದವರು, ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಜೀವನವನ್ನೇ ಮುಡಿಪಾಗಿಟ್ಟವರು. ಅವರ ಕೊಡುಗೆ ಮರೆಯುವಂತಿಲ್ಲ ಎಂದು ಬಣ್ಣಿಸಿದರು.
ಅಸ್ಪಶ್ಯರನ್ನು ನೋಡುವುದೇ ಮಹಾ ಅಪರಾಧವೆಂದು ಭಾವಿಸಿದ್ದ ಕಾಲದಲ್ಲಿ ಅತಿ ಶೂದ್ರ ಹೆಣ್ಣು ಮಕ್ಕಳ ಶಾಲೆ ಆರಂಭಿಸಿದ ಭಾರತದ ಶಿಕ್ಷಣ ಪಿತಾಮಹ ಜ್ಯೋತಿಬಾ ಫುಲೆ ಅವರ ನಂತರ ಆ ಜವಾಬ್ದಾರಿ ವಹಿಸಿಕೊಂಡು ಸಮರ್ಥವಾಗಿ ನಿಭಾಯಿಸಿದ ಸಾವಿತ್ರಿಬಾಯಿ ಫುಲೆ ಶಿಕ್ಷಣ ಮಾತೆಯಾಗಿ ಹೊರಹೊಮ್ಮಿದರು ಎಂದು ತಿಳಿಸಿದರು.
ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ನವೀನ್‌ಕುಮಾರ್, ಬಿಎಸ್‌ಐ ಜಿಲ್ಲಾ ಖಜಾಂಚಿ ಭೀಮನಕೆರೆ ಪಿ.ತಿಪ್ಪೇಸ್ವಾಮಿ, ಜಿಲ್ಲಾ ಕಾರ್ಯದರ್ಶಿ ನೀತಿಗೆರೆ ಮಂಜಪ್ಪ, ಉಪನ್ಯಾಸಕ ನಾಗೇಂದ್ರಪ್ಪ, ಶಿಕ್ಷಕಿ ಲಕ್ಷ್ಮಿದೇವಿ, ಜಿ.ಆರ್.ಹಳ್ಳಿ ದುರ್ಗೇಶ್, ಶಕುಂತಲಾ, ಶಾಂತಮ್ಮ, ತಿಪ್ಪೇಸ್ವಾಮಿ ಇತರರಿದ್ದರು.