ಸ್ತ್ರೀ ರೋಗ ತಜ್ಞೆಗೆ ಡಿಎಚ್‌ಒ ತರಾಟೆ

20KMD-2
Published on


ಕೆ.ಎಂ. ದೊಡ್ಡಿ: ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉತ್ತಮ ಸೌಲಭ್ಯವಿದ್ದರೂ ಸಹಜ ಹೆರಿಗೆಗಳನ್ನು ಮಾಡುತ್ತಿಲ್ಲ, ಶಸ್ತ್ರ ಚಿಕಿತ್ಸಾ ಹೆರಿಗೆಗಳು ನಡೆಯುತ್ತಿಲ್ಲ ಎಂದು ಆಸ್ಪತ್ರೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ವಿರುದ್ಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ ರೋಗಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು.
ಆಸ್ಪತ್ರೆಯನ್ನು ಮೇಲ್ಧರ್ಜೆಗೇರಿಸಿದ್ದು ಉತ್ತಮ ಸೌಲಭ್ಯವಿದ್ದರೂ ಸಹಜ ಹೆರಿಗೆಗಳು ನಡೆಯುತ್ತಿಲ್ಲ. ಇದಲ್ಲದೆ ಶಸ್ತ್ರಚಿಕಿತ್ಸಾ ಕೊಠಡಿ ಇದ್ದರೂ ಶಸ್ತ್ರಚಿಕಿತ್ಸಾ ಹೆರಿಗೆಗಳು ನಡೆಯುತ್ತಿಲ್ಲ. ಅಂದರೆ ಆಸ್ಪತ್ರೆಗೆ ಮಹಿಳೆಯರು ಬರುತ್ತಿಲ್ಲವೇ ಎಂದು ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ.ಶೋಭಾ ಅವರನ್ನು ಪ್ರಶ್ನಿಸಿದರು.
ಅದಕ್ಕೆ ಉತ್ತರಿಸಲು ಮುಂದದ ಡಾ.ಶೋಭಾ ಅವರಿಗೆ ನನಗೆ ಕಾರಣ ಹೇಳಬೇಡಿ. ನನಗೆ ಕೆಲಸ ಆಗಬೇಕು, ಸುಮ್ಮನೆ ವ್ಯರ್ಥ ಮಾತು ಬೇಡ. ಆಸ್ಪತ್ರೆಯಲ್ಲಿ ಹೆರಿಗೆಗಳು ನಡೆಯದಿದ್ದರೆ ಸೂಕ್ತ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ರೋಗಿಗಳನ್ನು ಅಲೆಸದೆ ಗುಣಮಟ್ಟದ ಚಿಕಿತ್ಸೆ ನೀಡಬೇಕು. ಹಳ್ಳಿಗಾಡಿನ ಪ್ರದೇಶದ ಜನತೆ ನಗರ ಪ್ರದೇಶಗಳಿಗೆ ತೆರಳಲು ಆರ್ಥಿಕ ಮುಗ್ಗಟು ಇದ್ದು ಅವರಿಗೆ ಎಲ್ಲ ಅಗತ್ಯ ಚಿಕಿತ್ಸೆಗಳು ಸಮುದಾಯ ಆರೋಗ್ಯ ಕೇಂದ್ರದಲ್ಲೇ ದೊರೆಯುವಂತೆ ಆಡಳಿತ ವೈದ್ಯಾಧಿಕಾರಿ ಡಾ.ಜಗದೀಶ್ ಅವರಿಗೆ ಸೂಚಿಸಿದರು.
ಆಸ್ಪತ್ರೆಯಲ್ಲಿ ಎಕ್ಸ್-ರೇ, ಲ್ಯಾಬ್‌ಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೂ ರೋಗಿಗಳನ್ನು ಖಾಸಗಿ ಆಸ್ಪತ್ರೆ, ಪ್ರಯೋಗಾಲಯಗಳಿಗೆ ಕಳುಹಿಸಬೇಡಿ. ಉತ್ತಮ ವೈದ್ಯರಿದ್ದು, ಆಸ್ಪತ್ರೆಗೆ ಬೇಕಾದ ಸೌಲಭ್ಯವನ್ನು ಒದಗಿಸಲು ನಾನು ಸದಾ ಸಿದ್ಧ ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net