

ಚಿತ್ರದುರ್ಗ: ಮಣಿಪುರ, ಉಡುಪಿಯಲ್ಲಿನ ಘಟನೆ ಖಂಡಿಸಿ ವೀರಶೈವ ಲಿಂಗಾಯತ, ಲಿಂಗಾಯತ ಶಿವಸಿಂಪಿ ಹಾಗೂ ವಿವಿಧ ಮಹಿಳಾ ಸಂಘಟನೆಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ದೇಶದೊಳಗೆ ಸ್ತ್ರೀ ಕುಲಕ್ಕೆ ರಕ್ಷಣೆ ಒದಗಿಸುವ ಮೂಲಕ ಸಮಾಜದಲ್ಲಿ ಗೌರವದಿಂದ ಬಾಳಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ಮಣಿಪುರದಲ್ಲಿ ಗಲಭೆ ತಾರಕಕ್ಕೇರಿದ್ದು, ಅದರಲ್ಲಿ ಮಹಿಳೆಯರಿಬ್ಬರ ಮೇಲೆ ನಡೆದ ಅತ್ಯಾಚಾರ, ಬೆತ್ತಲೆ ಮೆರವಣಿಗೆ ಇಡೀ ದೇಶವೇ ತಲೆತಗ್ಗಿಸುವಂತದ್ದು. ಇಂತಹ ಅಮಾನುಷ ಕೃತ್ಯ ಮರುಕಳಿಸದ ರೀತಿ ಕಟ್ಟೆಚ್ಚರ ವಹಿಸಬೇಕು ಎಂದು ಆಗ್ರಹಿಸಿದರು.
ಉಡುಪಿಯ ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿಯರು ಶೌಚಗೃಹ ಬಳಸುವ ವೇಳೆ ವಿಡಿಯೋ ಚಿತ್ರೀಕರಿಸಿ ತಮ್ಮದೇ ಕೋಮಿನವರೊಂದಿಗೆ ಹಂಚಿಕೊಂಡು ಹೇಯ ಕೃತ್ಯವೆಸಗಿದ ಮೂವರು ವಿದ್ಯಾರ್ಥಿನಿಯರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ನೊಂದವರಿಗೆ ನ್ಯಾಯ ಕೊಡಿಸಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಬೇಕು. ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ಮಹಿಳೆಯರ ರಕ್ಷಣೆಗೆ ವಿಶೇಷ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ವೀರಶೈವ ಲಿಂಗಾಯತ ಮಹಾಸಭಾದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಿರ್ಮಲಾ, ಕಾರ್ಯದರ್ಶಿ ರೀನಾ ವೀರಭದ್ರಪ್ಪ, ಲಿಂಗಾಯತ ಶಿವಸಿಂಪಿ ಮಹಿಳಾ ಘಟಕದ ಅಧ್ಯಕ್ಷೆ ಅನಿತಾ, ಕಾರ್ಯದರ್ಶಿ ಕವಿತಾ, ಗಾಯತ್ರಿ ಶಿವರಾಂ, ಮಂಗಳಾ, ಅನಿತಾ, ಸರೋಜಾ, ಕುಸುಮಾ, ಶೈಲಾ, ಸುಜಾತಾ, ಕವಿತಾ, ರಂಗಕರ್ಮಿ ಕೆಪಿಎಂ ಗಣೇಶಯ್ಯ, ಸಾಹಿತಿ ಡಾ.ಲೋಕೇಶ ಅಗಸನಕಟ್ಟೆ, ನಿವೃತ್ತ ಪ್ರಾಚಾರ್ಯ ಡಾ.ಸಂಗೇನಹಳ್ಳಿ ಅಶೋಕ್‌ಕುಮಾರ್ ಇತರರಿದ್ದರು.