ಸ್ತ್ರಿ ಕುಲಕ್ಕೆ ನಾಯಕತ್ವದ ಗುಣ ಇದೆ

bkt-27-3
ಬಾಗಲಕೋಟೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಉದ್ಘಾಟಿಸಿದರು. ಡಿಸಿ ಜಾನಕಿ ಕೆ.ಎಂ., ಸಿಇಒ ಶಶಿಧರ ಕುರೇರ, ಚಂದ್ರಶೇಖರ ದಿಡ್ಡಿ, ಅರುಣಾ ರಘುವೀರ, ಡಾ.ಸುವರ್ಣ ಕುಲಕರ್ಣಿ ಇತರರು ಇದ್ದರು.
Published on

ಬಾಗಲಕೋಟೆ: ಒಂದು ಮನೆ ಸುಸಜ್ಜಿತವಾಗಿ ಸಾಗಬೇಕಾದರೆ ಆ ಮನೆಯ ಮೇಲೆ ಹೆಣ್ಣಿನ ಜವಾಬ್ದಾರಿ ಇದ್ದು, ಕುಟುಂಬ ನಿರ್ವಹಣೆಯಲ್ಲಿ ಹೆಣ್ಣು ನಾಯಕತ್ವ ಗುಣ ಹೊಂದಿರುತ್ತಾಳೆ. ಅಲ್ಲದೆ ಎಲ್ಲವನ್ನು ನಿರ್ವಹಿಸುವ ಶಕ್ತಿ ಸ್ತ್ರಿ ಕುಲಕ್ಕೆ ಇದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಹೇಳಿದರು.

ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ ಹಾಗೂ ನಗರಸಭೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳಾ ನಾಯಕತ್ವ ಗುಣ ಹೊಂದಿದ್ದರೂ ಸಹ ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕಾಗಿದೆ ಎಂದರು.
ಸರ್ಕಾರ ಮಹಿಳೆಗೆ ಮೀಸಲಾತಿ ನೀಡಿದರು ಕೂಡಾ ಅಽಕಾರದಲ್ಲಿ ಬೆರಳಣಿಕೆಯಲ್ಲಿ ಜನ ಮಾತ್ರ ಕಾಣ ಸಿಗುತ್ತಾರೆ. ರಾಜಕೀಯದಲ್ಲಿ ಮಹಿಳೆ ಬಂದರು ಕೂಡಾ ಗಂಡ ಹಾಗೂ ಮಕ್ಕಳ ಮೇಲೆ ಅವಲಂಬಿತರಾಗುತ್ತಿದ್ದಾರೆ. ಇದಕ್ಕೆ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ. ಇಂದಿನ ಸಮಾಜದಲ್ಲಿ ಮಹಿಳೆ ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣ ಮುಖ್ಯವಾಗಿದೆ. ಶಿಕ್ಷಣ ಕಲಿತಾಗ ಮಾತ್ರ ತಮ್ಮ ಹಕ್ಕುಗಳನ್ನು ಪಡೆಯುವದರ ಜೊತೆಗೆ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಸಾಧ್ಯಾಗುತ್ತದೆ ಎಂದು ಹೇಳಿದರು.

ಮಹಿಳೆಯರಿಗೆ ಸಂವಿಧಾನದಲ್ಲಿ ಸಾಕಷ್ಟು ಹಕ್ಕುಗಳನ್ನು ಕೊಡಲಾಗಿದೆ. ಅವುಗಳನ್ನು ಪಡೆದುಕೊಳ್ಳದೇ ಹೊರತು ಅಭಿವೃದ್ಧಿ ಹೊಂದಲು ಸಾಧ್ಯವಾಗುವದಿಲ್ಲ. ಇದಕ್ಕೆ ಕಾಯ್ದೆಗಳ ಅರಿವಿನ ಕೊರತೆ ಎದ್ದು ಕಾಣುತ್ತಿದೆ. ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಲ್ಲಿ ಮಹಿಳಾ ಕಾನೂನುಗಳ ಬಗ್ಗೆ ಅರಿವು ಮೂಡಿಸಲುವ ಕೆಲಸವಾಗಬೇಕು. ಕೃಷಿ, ಪಶು, ತೋಟಗಾರಿಕೆ ಸಖಿಯರು ಇದ್ದಾರೆ. ಅವರ ಮೂಲಕ ಸೌಲಭ್ಯಗಳ ಮಾಹಿತಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿ.ಪಂ ಸಿಇಒ ಶಶಿಧರ ಕುರೇರ ಮಾತನಾಡಿ, ಸಮಾಜದ ಮುಖ್ಯವಾಹಿನಿಗೆ ಮಹಿಳೆಯರು ಬರಬೇಕಾದರೇ ಆರೋಗ್ಯ ಮತ್ತು ಶಿಕ್ಷಣ ಮುಖ್ಯವಾಗಿದೆ. ಯುವ ಪೀಳಿಗೆ ವಿದ್ಯಾಬ್ಯಾಸದಲ್ಲಿ ಹೆಚ್ಚಿನ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ಮಹಿಳೆಯರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಗಂಡಿಗೆ ಸಮಾನವಾಗಿ ಹೆಣಿಗೂ ಶಿಕ್ಷಣ ಕೊಡಿಸಿದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.

ಎಸ್ಪಿ ಅಮರನಾಥ ರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಗಂಡಿಗಿಂತ ಹೆಣ್ಣು ಮಕ್ಕಳ ಸಾಕ್ಷರತೆ ಪ್ರಮಾಣದಲ್ಲಿ ಕಡಿಮೆ ಇದೆ. ಶೇ.೮೬ ರಷ್ಟು ಪುರುಷರಿದ್ದರೆ, ಮಹಿಳೆಯರಲ್ಲಿ ಶೇ.೬೮ ರಷ್ಟು ಸಾಕ್ಷರರಾಗಿದ್ದಾರೆ. ಸ್ವಾತಂತ್ರ ಸಿಕ್ಕು ೭೮ ವರ್ಷವಾದರೂ ಶಿಕ್ಷಣದಲ್ಲಿ ಮಹಿಳೆ ಹಿಂದುಳಿದಿದ್ದಾರೆ. ಶಿಕ್ಷಣ ಕೊಡುವಲ್ಲಿ ಗಂಡು ಹೆಣ್ಣು ಎಂಬ ಕೀಳರಿಮೆ ಹೋಗಲಾಡಬೇಕು. ಇಬ್ಬರಿಗೂ ಸಮಾನ ಶಿಕ್ಷಣ ಕೊಡಿಸಲು ಮುಂದಾದಲ್ಲಿ ಮಾತ್ರ ಸುಧಾರಣೆ ಕಾಣಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಹಿರಿಯ ವಕೀಲೆ ಅರುಣಾ ರಘುವೀರ ಮಹಿಳೆ ರಕ್ಷಣೆ, ಹಕ್ಕುಗಳ ಹಾಗೂ ಕಾನೂನುಗಳ ಪರಿಣಾಮಕಾರಿ ಅನುಷ್ಠಾನ, ಡಾ.ರುದ್ರೇಶ್ ಪಿಸಿಪಿಎನ್‌ಡಿಟಿ ಕುರಿತು ಹಾಗೂ ಜಿಲ್ಲಾ ನಿರೂಪನಾಧಿಕಾರಿ ಅಮರೇಶ ಬಾಲ್ಯವಿವಾಹ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಽಕಾರಿ ಡಾ.ಸುವರ್ಣ ಕುಲಕರ್ಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net