ಚಾಮರಾಜನಗರ : ಈ ಬಾರಿಯ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಚಾಮರಾಜನಗರ ಸ್ತಬ್ಧಚಿತ್ರ ಮೈಸೂರು ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, ಈ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದಂತಾಗಿದೆ.
ಚಾಮರಾಜನಗರ ಜಿಲ್ಲಾ ಪಂಚಾಯಿತಿ ವತಿಯಿಂದ ಈ ಬಾರಿ ಪ್ರಕೃತಿಯ ಸೌಹಾರ್ದತೆಯೊಂದಿಗೆ ಪ್ರಗತಿಯತ್ತ ಸಾಗೋಣ ಎಂಬ ಮಾನವ-ಅರಣ್ಯ ಸಹಬಾಳ್ವೆಯ ಮಹತ್ವವನ್ನು ಸಾರುವ ಸ್ತಬ್ಧಚಿತ್ರವನ್ನು ನಿರ್ಮಾಣ ಮಾಡಲಾಗಿತ್ತು. ಪ್ರಕೃತಿ ಮತ್ತು ಮಾನವನ ಸಹಕಾರದಿಂದಲೇ ಅಭಿವೃದ್ಧಿ ಸಾಧ್ಯ ಎಂದು ಹೇಳಲು ಹೊರಟಂತಿದ್ದ ಸ್ತಬ್ಧ ಚಿತ್ರವನ್ನು ಜೀವ ಮಾಂತ್ರಿಕ ಕಲಾವಿದ ಮಧುಸೂದನ್ ಹೊಸೂರು ಅವರ ತಂಡದವರು ಬಹಳ ಅದ್ಭುತವಾಗಿ ನಿರ್ಮಾಣ ಮಾಡಿದ್ದರು. ಮೆರವಣಿಗೆಯಲ್ಲೂ ಪ್ರೇಕ್ಷಕರಿಂದ ಚಾಮರಾಜನಗರ ಸ್ತಬ್ಧ ಚಿತ್ರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಯಿತು. ಅದರಂತೆ ಮೈಸೂರು ವಿಭಾಗದಿಂದ ಚಾಮರಾಜನಗರ ಸ್ತಬ್ಧಚಿತ್ರ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದು, ಜಿಲ್ಲೆಯ ಜನತೆ ಭರಪೂರ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಪ್ರಶಸ್ತಿಯಲ್ಲಿ ಹ್ಯಾಟ್ರಿಕ್ ಸಾಧನೆ:
ಮೈಸೂರಿನಲ್ಲಿ 2023ರಲ್ಲಿ ನಡೆದ ದಸರಾ ಮೆರವಣಿಗೆಯಲ್ಲಿ ಜಿಲ್ಲೆಯ ಜಾನಪದ ಭಕ್ತಿಯ ಬೀಡು, ಹುಲಿ ಆನೆಗಳ ಸಂತೃಪ್ತಿಯ ತಾಣ ಎಂಬ ಸ್ತಬ್ಧಚಿತ್ರಕ್ಕೆ ಪ್ರಥಮ ಬಹುಮಾನ ಬಂದಿತ್ತು. 2024ರಲ್ಲಿ ನಡೆದ ಜಿಲ್ಲೆಯ ಸೋಲಿಗರ ಸೊಬಗು ಒಮ್ಮೆ ನೀ ಬಂದು ನೋಡು ಎಂಬ ಸ್ತಬ್ಧಚಿತ್ರಕ್ಕೆ ತೃತೀಯ ಬಹುಮಾನ ಬಂದಿತು. ಈ ಬಾರಿಯ ಮೈಸೂರು ದಸರಾ ಮೆರವಣಿಗೆಯಲ್ಲಿ ಜಿಲ್ಲೆಯ ಸ್ತಬ್ಧಚಿತ್ರ ಪ್ರಥಮ ಸ್ಥಾನ ಪಡೆದುಕೊಳ್ಳುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದೆ. ಈ ನಿಟ್ಟಿನಲ್ಲಿ ಆಕರ್ಷಕವಾಗಿ ಸ್ತಬ್ಧಚಿತ್ರವನ್ನು ನಿರ್ಮಾಣ ಮಾಡಲು ಶ್ರಮವಹಿಸಿದ ಕಲಾವಿದರು ಹಾಗೂ ಅಗತ್ಯ ಪ್ರೋತ್ಸಾಹ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ ಮೋನಾರೋತ್ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಜಿಲ್ಲೆಯ ಜನತೆ ಭರಪೂರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗೊರವರ ಕುಣಿತಕ್ಕೆ ದ್ವಿತೀಯ ಸ್ಥಾನ: ಅಲ್ಲದೆ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಚಾಮರಾಜನಗರದ ಗೊರವರ ಕುಣಿತ ಕಲಾತಂಡಕ್ಕೂ ದ್ವಿತೀಯ ಸ್ಥಾನ ಲಭಿಸಿದೆ. ನಗರದ ರಾಮಸಮುದ್ರ ಬಡಾವಣೆಯ ಶ್ರೀ ಭಕ್ತ ಕನಕದಾಸರ ಗೊರವರ ಕುಣಿತ ಕಲಾಸಂಘದ ಆರ್.ಎಂ.ಶಿವಮಲ್ಲು ತಂಡ ಮೆರವಣಿಗೆಯಲ್ಲಿ ಗಮನ ಸೆಳೆದಿದ್ದು, ಕಲಾತಂಡಗಳಿಗೆ ನೀಡುವ ಪ್ರಶಸ್ತಿಗಳ ಪೈಕಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.
ಜಿಲ್ಲಾ ಪಂಚಾಯಿತಿ ಸಿಇಒ ಮೋನಾರೋತ್ ಅವರ ಮಾರ್ಗದರ್ಶನ ಮತ್ತು ಸಹಕಾರಿಂದ ಸ್ತಬ್ಧಚಿತ್ರವನ್ನು ಚೆನ್ನಾಗಿ ರೂಪಿಸಿದ್ದೆವು. ಸಿಎಂ ಸಿದ್ದರಾಮಯ್ಯ ಅವರು ಟ್ಯಾಬ್ಲೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಮಗೆ ಪ್ರಶಸ್ತಿ ಬರುತ್ತದೆ ಎಂಬ ನಿರೀಕ್ಷೆ ಇತ್ತು. ಮಧುಸೂದನ್ ಹೊಸೂರು, ಚಿತ್ರಕಲಾವಿದ, ಚಾಮರಾಜನಗರ