ಸ್ತನ್ಯಪಾನ ಮಾಡಿಸಲು ದುಡಿಯುವ ತಾಯಂದಿರಿಗಿದೆ ವೈಜ್ಞಾನಿಕ ಪರಿಹಾರ

Published on

ಮೈಸೂರು: ಸಾಂಸ್ಕೃತಿಕ ಹಾಗೂ ಸಾಮಾಜಿಕ ನಿಷೇಧವನ್ನು ಮೆಟ್ಟಿ ನಿಂತು ತಾಯಂದಿರುವ ಶಿಶುಗಳಿಗೆ ಸ್ತನ್ಯಪಾನ ಮಾಡಿಸಬೇಕಾದ ಅಗತ್ಯ ಇದೆ ಎಂದು ನಗರದ ಮಣಿಪಾಲ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯೆ ಡಾ.ಕೆ.ಜಿ.ಅಮೂಲ್ಯ ಹೇಳಿದರು.


ಅನೇಕ ಮಹಿಳೆಯರು ತಾಯಿಹಾಲು ಸಂಬಂಧಿತ ಸಮಸ್ಯೆ ಎದುರಿಸುತ್ತಿದ್ದು, ಈ ಬಗ್ಗೆ ಅವರಿಗೆ ಸೂಕ್ತ ಮಾರ್ಗದರ್ಶನ ಅಗತ್ಯವಾಗಿದೆ. ಹೀಗಾಗಿ ಸ್ತನ್ಯಪಾನ ಸಪ್ತಾಹವನ್ನು ಮಣಿಪಾಲ ಆಸ್ಪತ್ರೆಯಿಂದಲೂ ಆಚರಣೆ ಮಾಡುತ್ತಿದ್ದು, ಜಾಗೃತಿ ಅಭಿಯಾನವನ್ನೂ ಕೈಗೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಸ್ತನ್ಯಪಾನದ ಬಗ್ಗೆ ತಾಯಂದಿರು, ಕುಟುಂಬದವರಲ್ಲಿ ಕೆಲ ತಪ್ಪು ಕಲ್ಪನೆಗಳಿವೆ. ದುಡಿಯುವ ವರ್ಗದ ಕೆಲ ತಾಯಂದಿರು ತಮಗೆ ಸ್ತನ್ಯಪಾನ ಮಾಡಿಸಲು ಸಮಯ ಸಾಲದು, ಹೀಗಾಗಿ ಕೆಲಸದ ಬದಲಿಗೆ ಮಗುವನ್ನು ನೋಡಿಕೊಳ್ಳುವುದೇ ಪ್ರಮುಖ ಎಂಬ ನಿರ್ಧಾರದಿಂದ ಉದ್ಯೋಗವನ್ನು ತ್ಯಜಿಸುತ್ತಾರೆ. ಆದರೆ ಇವಕ್ಕೆಲ್ಲ ವೈಜ್ಞಾನಿಕ ಪರಿಹಾರವಿದೆ ಎಂದು ತಿಳಿಸಿದರು.


ಈ ವರ್ಷದ ಸ್ತನ್ಯಪಾನ ಸಪ್ತಾಹದ ವಿಷಯ ‘ನಾವು ಸ್ತನ್ಯಪಾನ ಮತ್ತು ಕೆಲಸ ಎರಡನ್ನೂ ಮಾಡೋಣ’ ಎಂಬುದಾಗಿರುವುದು ಗಮನಾರ್ಹ. ಕೆಲಸದಲ್ಲಿರುವ ತಾಯಂದಿರು ತಮ್ಮ ಹಾಲನ್ನು ಸಂಗ್ರಹಿಸಿ, ಸಾಮಾನ್ಯ ವಾತಾವರಣದ ಉಷ್ಣಾಂಶದಲ್ಲಿ ಸುಮಾರು ಆರು ಗಂಟೆಗಳ ಕಾಲ ಇರಿಸಬಹುದಾಗಿದೆ. ಹೀಗಾಗಿ ಅವರು ಕೆಲಸಕ್ಕೆ ಹೋದರೂ ಮನೆಯಲ್ಲಿರುವವರು ಅದೇ ಹಾಲನ್ನು ಮಗುವಿಗೆ ಉಣಿಸಬಹುದಾಗಿದೆ ಎಂದು ತಿಳಿಸಿದರು.
ಸ್ತನ್ಯಪಾನ ಕುರಿತಂತೆ ತಾಯಂದಿರು ಎದುರಿಸುವ ಸವಾಲು ಹಾಗೂ ಅವುಗಳಿಗೆ ಪರಿಹಾರ ಕುರಿತು ಅರಿವು ಮೂಡಿಸುವುದೇ ಈ ಅಭಿಯಾನದ ಉದ್ದೇಶವಾಗಿದೆ ಎಂದರು.


ಸ್ತನ ಸಂಬಂಧಿ ಸಮಸ್ಯೆಗಳು ಶಿಶುವಿನ ತಾಯಿಹಾಲು ಮತ್ತು ಅದನ್ನು ಹೀರುವಿಕೆಯ ಮೇಲೆ ಪರಿಣಾಮ ಬೀರಬಹುದಾಗಿದೆ. ಹೀಗಾಗಿ, ತಾಯಿಹಾಲನ್ನು ಸಂಗ್ರಹಿಸುವುದಕ್ಕೆ ಸಂಬಂಧಿಸಿದಂತೆಯೂ ಅಭಿಯಾನವು ಶಿಕ್ಷಣ ಮತ್ತು ಅರಿವು ಮೂಡಿಸುತ್ತದೆ. ಕೆಲಸದ ಸ್ಥಳಗಳಲ್ಲಿ ಸ್ತನ್ಯಪಾನ ಮಾಡಿಸಲು ಸೂಕ್ತ ತಾಣಗಳಿಲ್ಲ ಎಂದಾಗ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿಯ ಮೂಲಕ ಮೀಟಿಂಗ್ ಹಾಲ್‌ನಂಥ ಸ್ಥಳಗಳಲ್ಲಿ ಸುರಕ್ಷಿತ ವ್ಯವಸ್ಥೆ

ಮಾಡಿಕೊಳ್ಳಬಹುದಾಗಿದೆ. ಇದಕ್ಕೆ ಅಗತ್ಯವಾದ ಎಲ್ಲ ಸೌಲಭ್ಯ ಒದಗಿಸುವುದು ಆ ಸಂಸ್ಥೆಯ ಹೊಣೆ ಎಂದು ಸರ್ಕಾರದ ನಿಯಮ ತಿಳಿಸಿದೆ. ಹೀಗಾಗಿ ತಾಯಂದಿರು ಇದರ ಪ್ರಯೋಜನ ಪಡೆಯಬೇಕೆಂದು ಸಲಹೆ ನೀಡಿದರು.
ವೈದ್ಯರಾದ ಡಾ.ವಿನುತಾ, ಡಾ. ಶಾಹೀನ್ ಅಖ್ತರ್, ಕೆ. ಇಸ್ಮಾಯಿಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net