

ಕಲಬುರಗಿ: ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸ್ಟೈಫಂಡ್ ಹಣ ಅಕ್ರಮವಾಗಿ ಹಿಂಪಡೆದಿದ್ದಾರೆ ಎಂದು ಆರೋಪಿಸಿ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿನ (ಎಂಆರ್‌ಎಂಸಿ) ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಬಸವೇಶ್ವರ ಆಸ್ಪತ್ರೆ ಆವರಣದ ಓಪಿಡಿ ವಿಭಾಗದ ಎದುರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ತರಗತಿ ಬಹಿಷ್ಕರಿಸಿ, ಓಪಿಡಿ ಕೈಬಿಟ್ಟು ಶಿಷ್ಯ ವೇತನ ನೀಡಬೇಕು ಎಂದು ಆಗ್ರಹಿಸಿ ಆಸ್ಪತ್ರೆ ಮುಂಭಾಗದಿಂದ ಓಪಿಡಿ ಕಟ್ಟಡದ ಎದುರಿನವರೆಗೆ ಬೃಹತ್ ಪ್ರತಿಭಟನೆ ನಡೆಸಿ, ನ್ಯಾಯ ಕೊಡಿ. ವಿದ್ಯಾರ್ಥಿಗಳ ಶಿಷ್ಯವೇತನ ನೀಡಿ ಎಂದು ಘೋಷಣೆ ಕೂಗಿದರು. ನ್ಯಾಯಯುತ ಶಿಷ್ಯವೇತನ ನೀಡಿ, ಗೌರವಯುತ ಶಿಷ್ಯವೇತನ ಪಾವತಿಸಿ, ಪ್ರತಿಭಟನೆ ತಡೆಯಿರಿ, ನ್ಯಾಯಕ್ಕಾಗಿ ಒಗ್ಗಟ್ಟಿನ ಹೋರಾಟ, ಸ್ಟೈಫಂಡ್ ವಿಳಂಬ ಆರೋಗ್ಯ ವಿಳಂಬ, ತ್ವರಿತವಾಗಿ ಶಿಷ್ಯವೇತನ ಕೊಡಿಸಿ, ಸ್ಟೈಫಂಡ್ ವಿಳಂಬ ಆರೋಗ್ಯ ರಕ್ಷಣೆಗೆ ಅಡ್ಡಿ, ಜೀವಗಳನ್ನು ಉಳಿಸಿ ಎಂಬುದು ಸೇರಿ ವಿವಿಧ ನಾಮಫಲಕಗಳನ್ನು ಹಿಡಿದು ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ನಿರತರಿಗೆ ಎಚ್ಚರಿಕೆ: ಬಸವೇಶ್ವರ ಆಸ್ಪತ್ರೆಯ ಓಪಿಡಿ ಎದುರಿನ ರಸ್ತೆಯಲ್ಲಿ ಪಿಜಿ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸುತ್ತಿರುವ ವೇಳೆ ಸಂಸ್ಥೆಯ ಆಡಳಿತ ಮಂಡಳಿಯ ಕೆಲವರು ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆ ಮಾಡಬೇಡಿ ಎಂದು ವಿನಂತಿಸಿ, ಸಮಾಧಾನ ಪಡಿಸಿದರು. ಮಾತುಕತೆಯನ್ನು ನಡೆಸೋಣ ಎಂದು ಭರವಸೆ ನೀಡಿದ್ದರಿಂದ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಸಭಾಂಗಣಕ್ಕೆ ತೆರಳಿದರು. ಅಲ್ಲಿಯೂ ವಿದ್ಯಾರ್ಥಿಗಳು ನಾಮಫಲಕಗಳೊಂದಿಗೆ ಪ್ರತಿಭಟನೆ ನಡೆಸಿ, ತಮ್ಮ ಬೇಡಿಕೆಯನ್ನು ಮಂಡಿಸಿದರು.