

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ-ಬೆಳಗಾವಿ ಕ್ಲಸ್ಟರ್ನಲ್ಲಿ ಕಳೆದ 1 ವರ್ಷಗಳ ಅವಧಿಯಲ್ಲಿ 8 ಸ್ಟಾರ್ಟ್ಅಪ್ಗಳು ಕಾರ್ಯಾರಂಭ ಮಾಡಿದ್ದು, 1200 ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಇಲೆಕ್ಟ್ರಾನಿಕ್ಸ್, ಐಟಿ ಬಿಟಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಸಿ.ಎನ್. ತಿಳಿಸಿದರು.
ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಟಾರ್ಟ್ಅಪ್ ಗ್ರಿಡ್ನಲ್ಲಿ 400 ಸ್ಟಾರ್ಟ್ಅಪ್ಗಳು ನೋಂದಣಿ ಮಾಡಿದ್ದು, 2022-23ನೇ ವರ್ಷಾಂತ್ಯಕ್ಕೆ ಈ ಸಂಖ್ಯೆ 800ಕ್ಕೆ ಏರಿಕೆಯಾಗಲಿದೆ. ಹು-ಧಾ-ಬೆ ಯಿಂದ ಕಾರ್ಯಾರಂಭ ಮಾಡಲು ಈಗಾಗಲೇ 120 ಸ್ಟಾರ್ಟ್ ಅಪ್ಗಳು ನೋಂದಣಿಯಾಗಿವೆ ಎಂದರು.
ಬೆಳಗಾವಿಯಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ಗ್ಲೋಬಲ್ ಎಮರ್ಜಿಂಗ್ ಡಿಸೈನಿಂಗ್ ಟೆಕ್ನಾಲಜಿ ಸೆಂಟರ್ ಸ್ಥಾಪನೆ ಮಾಡುತ್ತಿದ್ದೇವೆ. ಹುಬ್ಬಳ್ಳಿಯಲ್ಲಿ ಎರಡು ದಿನಗಳ ಕಾಲ ನಡೆದ ಬಿಯಾಂಡ್ ಬೆಂಗಳೂರು ಸಮ್ಮಿಟ್ನಲ್ಲಿ 10 ಸ್ಟಾರ್ಟ್ ಅಪ್ಗಳಿಗೆ ಫಂಡಿಂಗ್ ಮಾಡಲು ಹೂಡಿಕೆದಾರರು ಆಸಕ್ತಿ ತೋರಿಸಿದ್ದಾರೆ. ಇವು 100 ಮಿಲಿಯನ್ ಡಾಲರ್ ಹೂಡಿಕೆಯನ್ನು ನಿರೀಕ್ಷಿಸುತ್ತಿವೆ ಎಂದು ತಿಳಿಸಿದರು.
ಸಿಇಟಿ ರ‍್ಯಾಂಕಿಂಗ್ ವೈಜ್ಞಾನಿಕ
ಸಿಇಟಿ ರ್ಯಾಂಕಿಂಗ್ಅನ್ನು ವೈಜ್ಞಾನಿಕವಾಗಿಯೇ ಮರು ಹಂಚಿಕೆ ಮಾಡಲಾಗಿದ್ದು, ಈ ಬಗ್ಗೆ ಹೈ ಕೋರ್ಟ್ ವಿಭಾಗೀಯ ಪೀಠ ಮೆಚ್ಚುಗೆ ವ್ಯಕ್ತಪಡಿಸಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ)ನ ಸುತ್ತೋಲೆ ಪ್ರಕಾರ ಅಕ್ಟೋಬರ್ 21ರೊಳಗೆ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ. ಅವಕಾಶ ಕೊಟ್ಟರೆ ಪ್ರವೇಶ ಪ್ರಕ್ರಿಯೆ ಅವಧಿಯನ್ನು ವಿಸ್ತರಣೆ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಿರುವ ಬಗ್ಗೆ ಆರ್ಎಸ್ಎಸ್ ಕಳವಳ ವ್ಯಕ್ತಪಡಿಸಿರುವುದನ್ನು ಒಪ್ಪಿಕೊಳ್ಳುತ್ತೇವೆ. ಭಾರತದಲ್ಲಿ ಅಷ್ಟೇ ಅಲ್ಲ, ಕೋವಿಡ್ನಿಂದ ವಿಶ್ವದೆಲ್ಲೆಡೆ ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುತ್ತಿದ್ದೇವೆ ಎಂದು ಹೇಳಿದರು.