ಸ್ಟಾರ್ ಏರ್‌ಲೈನ್ಸ್‌ಗೆ ದಂಡ

Star-Air
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಮಾನ ರದ್ದಾದರೂ ಪರ್ಯಾಯ ವ್ಯವಸ್ಥೆ ಕಲ್ಪಿಸದ ಕಾರಣಕ್ಕೆ ಸ್ಟಾರ್ ಏರಲೈನ್ಸ್‌ಗೆ ಜಿಲ್ಲಾ ಗ್ರಾಹಕರ ಆಯೋಗ 8,10,000 ರೂ. ದಂಡ ವಿಧಿಸಿ ಸೋಮವಾರ ಆದೇಶ ಹೊರಡಿಸಿದೆ.
ನಗರದ ವಕೀಲೆ ಮಹೇಶ್ವರಿ ಉಪ್ಪಿನ (ದೇಸಾಯಿ) ಹಾಗೂ ಅವರೊಂದಿಗೆ 26 ಜನ ಹುಬ್ಬಳ್ಳಿಯ ಸುರಕ್ಷಾ ಟೂರ್ಸ್‌ ಮತ್ತು ಟ್ರಾವೆಲ್ಸ್ ಮೂಲಕ 2022ರ ಅ. 9ರಿಂದ 19ರವರೆಗೆ ದೆಹಲಿ, ಹರಿದ್ವಾರ, ಪ್ರಯಾಗರಾಜ, ಸೇರಿ ಉತ್ತರ ಭಾರತ ಪ್ರವಾಸ ನಿಗದಿ ಮಾಡಿದ್ದರು. ದೆಹಲಿಯಿಂದ ಎಲ್ಲ ಕ್ಷೇತ್ರಗಳ ದರ್ಶನದ ಬಳಿಕ ಹುಬ್ಬಳ್ಳಿಗೆ ಕರೆತರುವ ಜವಾಬ್ದಾರಿ ಸುರಕ್ಷಾ ಟೂರ್ಸ್‌ ಮತ್ತು ಟ್ರಾವಲ್ಸ್‌ನವರದಾಗಿತ್ತು. ಅದರಂತೆ ಸಂಸ್ಥೆ ಮಾಲೀಕ ಸುನೀಲ ತೊಗರಿ ಅವರಿಗೆ ತಲಾ ಅಂದಾಜು 21,000 ರೂ. ನೀಡಿದ್ದರು.
ಹುಬ್ಬಳ್ಳಿಯಿಂದ ದೆಹಲಿಗೆ ತೆರಳಲು ಸ್ಟಾರ್‌ಏರಲೈನ್ಸ್ ಟಿಕೆಟ್ ಬುಕ್ ಮಾಡಿದ್ದರು. 9-10-2022ರಂದು ಹುಬ್ಬಳ್ಳಿಯಿಂದ ದೆಹಲಿಗೆ ಹೋಗಬೇಕಾದ ಸ್ಟಾರ್‌ಏರಲೈನ್ಸ್ ರದ್ದಾಗಿದೆ. ಆದರೆ ಏರಲೈನ್ಸ್‌ನವರು ಬೇರೆ ವ್ಯವಸ್ಥೆ ಮಾಡದ ಕಾರಣ ಸುರಕ್ಷಾ ಸಂಸ್ಥೆ ಪ್ರವಾಸಿಗರಿಗೆ ದೆಹಲಿ ತಲುಪುವ ವ್ಯವಸ್ಥೆ ಮಾಡಿದ್ದಲ್ಲದೆ, ಕ್ಷೇತ್ರಗಳ ದರ್ಶನ ಬಳಿಕ ಹುಬ್ಬಳ್ಳಿಗೆ ಕರೆತಂದಿದ್ದರು.
ಪ್ರವಾಸಕ್ಕೂ ಕೆಲ ತಿಂಗಳು ಮುನ್ನ ಟಿಕೆಟ್ ಬುಕ್ ಮಾಡಿದ್ದರೂ ಸ್ಟಾರ್ ಏರಲೈನ್ಸ್ ರದ್ದಾಗಿದ್ದರಿಂದ ಅನನುಕೂಲ ಹಾಗೂ ಮಾನಸಿಕ ತೊಂದರೆಯಾಗಿದೆ. ಸೇವಾ ನ್ಯೂನ್ಯತೆ ಎಸಗಿದ್ದಾರೆ ಎಂದು ಸುರಕ್ಷಾ ಟೂರ್ಸ್‌ ಮತ್ತು ಸ್ಟಾರ್‌ಏರಲೈನ್ಸ್ ವಿರುದ್ಧ 2023ರ ಫೆಬ್ರವರಿಯಲ್ಲಿ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ದೂರಿನ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ವಿಮಾನ ರದ್ದಾದರೂ ಸುರಕ್ಷಾ ಟೂರ್ಸ್‌ ಮಾಲೀಕ ಸುನೀಲ ಸ್ವಂತ ಹಣದಲ್ಲಿ ಸಮಯಕ್ಕೆ ದೆಹಲಿ ತಲುಪಿಸಿದ್ದಾರಲ್ಲದೆ, ಕ್ಷೇತ್ರ ದರ್ಶನ ಬಳಿಕ ಹಬ್ಬಳ್ಳಿ ತಲುಪಿಸಿದ್ದಾರೆ. ಹೀಗಾಗಿ ಅವರಿಂದ ಸೇವಾ ನ್ಯೂನ್ಯತೆ ಆಗಿಲ್ಲ. ಸ್ಟಾರ್ ಏರಲೈನ್ಸ್ ಸೇವಾ ನ್ಯೂನ್ಯತೆ ಎಸಗಿದ್ದು, 27 ಜನರಿಗೆ ತಲಾ 25,000 ರೂ. ಪರಿಹಾರ, 5000 ರೂ. ಪ್ರಕರಣ ವೆಚ್ಚ ಎಂದು ಒಟ್ಟು 8,10,000 ರೂ.ಗಳನ್ನು ಒಂದು ತಿಂಗಳಲ್ಲಿ ನೀಡಬೇಕು. ವಿಮಾನ ರದ್ದಾದ ತಕ್ಷಣ ಪರ್ಯಾಯ ವ್ಯವಸ್ಥೆ ಮಾಡಿದ್ದರಿಂದ 1,66,823 ರೂ. ಹೆಚ್ಚಿಗೆ ವೆಚ್ಚವಾಗಿದೆ ಎಂದು ಸುರಕ್ಷಾ ಟೂರ್ಸ್‌ ಮಾಲೀಕ ಸುನೀಲ ತೊಗರಿ ಬೇಡಿಕೆ ಪುರಸ್ಕರಿಸಿದ ಆಯೋಗ, ಆ ಹಣವನ್ನು ಒಂದು ತಿಂಗಳಲ್ಲಿ ನೀಡಬೇಕು. ನಿಗದಿತ ಸಮಯದಲ್ಲಿ ಹಣ ನೀಡದಿದ್ದರೆ ತೀರ್ಪು ನೀಡಿದ ದಿನಾಂಕದಿಂದ ಶೇ. 8ರಂತೆ ಬಡ್ಡಿ ನೀಡಲು ಸ್ಟಾರ್‌ಏರಲೈನ್ಸ್‌ಗೆ ಆಯೋಗ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net