ಸ್ಟಾಫ್ ನರ್ಸ್ ನೇಮಕದಲ್ಲಿ ಹಗರಣ?

Scam in recruitment of staff nurse_
ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
Published on

ವಿಜಯಪುರ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಷ್ಟ್ರೀಯ ಉಪಶಾಮಕ ಆರೈಕೆ (ಎನ್‌ಪಿಸಿಸಿ) ಕಾರ್ಯಕ್ರಮದಡಿ ಕರೆಯಲಾಗಿರುವ ಗುತ್ತಿಗೆ ಆಧಾರಿತ ನೇಮಕ ಪ್ರಕ್ರಿಯೆಯಲ್ಲಿ ಭಾರಿ ಹಗರಣದ ಆರೋಪ ಕೇಳಿ ಬಂದಿದ್ದು, ಇದಕ್ಕೆ ಪೂರಕವಾಗಲಿ, ವ್ಯತಿರಿಕ್ತವಾಗಲಿ ಸೂಕ್ತವಾಗಿ ಸ್ಪಂದಿಸದಿರುವ ಅಧಿಕಾರಿಗಳ ನಡೆ ಆರೋಪವನ್ನು ಪುಷ್ಠೀಕರಿಸುತ್ತಿದೆ !

ಹೌದು, 2022-23ನೇ ಸಾಲಿನ ಆರ್‌ಒಪಿಯಲ್ಲಿ ಅನುಮೋದಿತ ಅನ್ವಯ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಶುಶ್ರೂಷಣಾಧಿಕಾರಿ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿತ್ತು. ಆ ಪ್ರಕಾರ ಅರ್ಜಿ ಸಲ್ಲಿಸಿದವರ ಪೈಕಿ 8 ಜನರನ್ನು ಆಯ್ಕೆ ಮಾಡಲಾಗಿದ್ದು, ಯುನಸ್ ಮುಜಾವರ, ಭಾಗ್ಯಶ್ರೀ ವಿಠಲ ಮಾನಕರ, ಲಕ್ಷ್ಮಿ ಶಿವಾಜಿ ಹಾದಿಮನಿ, ವಿಠಲ ಗಂಗಾರಾಮ ಕ್ಷತ್ರಿ, ನಾಗರಾಜ ರೋಜಾ, ಅನಿತಾ, ಭಾಗವ್ವ ಎಸ್.ಪೂಜಾರಿ ಹಾಗೂ ಮಲಂಗ ಮುಜಾವರ ಎಂಬುವರ ಹೆಸರು ಅಂತಿಮ ಪಟ್ಟಿಯಲ್ಲಿ ಪ್ರಕಟಿಸಲಾಗಿದೆ. 2023, ಜೂ.16ರಂದೇ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಆಯ್ಕೆಗೊಂಡವರ ಪೈಕಿ ಇಬ್ಬರು ಇನ್ನೂ ಹಾಜರಾಗಿಲ್ಲ. ಇನ್ನುಳಿದ ಆರು ಜನರ ಪೈಕಿ ಓರ್ವ ಬಿಟ್ಟು ಹೋಗಿದ್ದು, ಸದ್ಯ ಐದು ಜನ ಕಾರ್ಯನಿರ್ವಹಿಸುತ್ತಿದ್ದಾರೆಂದು ಎನ್‌ಪಿಸಿಸಿ ಕಾರ್ಯಕ್ರಮಾಧಿಕಾರಿ ಕವಿತಾ ದೊಡ್ಡಮನಿ ತಿಳಿಸುತ್ತಾರೆ. ಆದರೆ, ವಿಠಲ ಗಂಗಾರಾಮ ಕ್ಷತ್ರಿ ಎಂಬಾತ ಅಧಿಕೃತ ಆದೇಶ ಪ್ರತಿ ಹಿಡಿದು ಇಲಾಖೆಗೆ ಅಲೆದಾಡುತ್ತಿದ್ದರೂ ಇಲ್ಲಸಲ್ಲದ ಸಬೂಬು ಹೇಳುತ್ತಿದ್ದಾರೆ ಎಂದು ಅಭ್ಯರ್ಥಿ ಕಣ್ಣೀರಾದರು.

ಆಯ್ಕೆ ಪ್ರಕ್ರಿಯೆ ನಡೆಸಿ ಅಂತಿಮ ಪಟ್ಟಿ ಪ್ರಕಟಿಸಿ ಆದೇಶ ಪ್ರತಿ ನೀಡಿರುವ ಜಿಲ್ಲಾ ಆರೋಗ್ಯಾಧಿಕಾರಿ ರಾಜಕುಮಾರ ಯರಗಲ್ಲ ಬಾಗಲಕೋಟೆಗೆ ವರ್ಗವಾಗಿದ್ದಾರೆ. ಸದ್ಯ ಬಾಗಲಕೋಟೆಯಲ್ಲಿ ಕುರ್ಚಿಗಾಗಿ ಪೈಪೋಟಿಗಿಳಿದಿರುವ ಅವರು ವಿಜಯಪುರದಲ್ಲಿ ನಡೆಸಿರುವ ಶುಶ್ರೂಷಣಾಧಿಕಾರಿ ಆಯ್ಕೆ ಪ್ರಕ್ರಿಯೆಯೇ ಅನಧಿಕೃತ ಎಂಬ ಆಘಾತಕಾರಿ ಸಂಗತಿ ಹೊರಬಿದ್ದಿದೆ. ಯಾವುದೇ ಆಯ್ಕೆ ಪ್ರಕ್ರಿಯೆ ನಡೆಸಲು ಜಿಲ್ಲಾ ಆರೋಗ್ಯ ಸಮಿತಿ ಸಭೆಯಲ್ಲಿ ಚರ್ಚಿಸಬೇಕಾಗುತ್ತದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರೋಗ್ಯ ಇಲಾಖೆ ಉಸ್ತುವಾರಿಯಾಗಿದ್ದು, ಅವರ ಅಧ್ಯಕ್ಷತೆಯಲ್ಲಿಯೇ ಈ ಸಭೆ ನಡೆಸಬೇಕು. ಸಭೆಯಲ್ಲಿ ಚರ್ಚಿಸಿದ ಬಳಿಕ ಸಿಇಒ ಅವರ ಸಹಿಯೊಂದಿಗೆ ಅಧಿಕೃತವಾಗಿ ಆಯ್ಕೆ ಪಟ್ಟಿ ಅಂತಿಮಗೊಳ್ಳಬೇಕು. ಆದರೆ, ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲವೆಂದು ಸಿಇಒ ರಾಹುಲ್ ಶಿಂಧೆ ತಿಳಿಸುತ್ತಾರೆ.

ಸದ್ಯ ಪ್ರಭಾರ ಡಿಎಚ್‌ಒ ಆಗಿ ಡಾ. ಸಂಪತ್ ಗುಣಾರಿ ನೇಮಕಗೊಂಡಿದ್ದು, ಅವರಿಗೂ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಇದೀಗ ಅಧಿಕಾರ ವಹಿಸಿಕೊಂಡಿದ್ದು, ಮಾಹಿತಿ ಕಲೆ ಹಾಕುವುದಾಗಿ ತಿಳಿಸುತ್ತಾರೆ. ಅಲ್ಲದೆ, ಜಿಪಂ ಸಿಇಒ ಅವರ ಅಧ್ಯಕ್ಷತೆಯಲ್ಲಿ ಶೀಘ್ರದಲ್ಲಿಯೇ ಸಭೆ ನಡೆಯಲಿದ್ದು, ಈ ಬಗ್ಗೆ ಸಭೆಯಲ್ಲಿ ಚರ್ಚಿಸುವುದಾಗಿಯೂ ಅವರು ತಿಳಿಸುತ್ತಾರೆ.

ಇನ್ನು ಕಾರ್ಯಕ್ರಮಾಧಿಕಾರಿ ಕವಿತಾ ದೊಡ್ಡಮನಿ ಅವರು ‘ಈ ಹಿಂದಿನ ಡಿಎಚ್‌ಒ ಅವರು ಆದೇಶ ನೀಡಿದ್ದಾರೆ. ಸಿಇಒ ಅವರ ಸಹಿ ಪಡೆಯಬೇಕಿತ್ತು. ಆದರೆ, ಸಹಿ ಆಗಿಲ್ಲ. ಹೀಗಾಗಿ ಮತ್ತೊಮ್ಮೆ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು’ ಎನ್ನುತ್ತಾರೆ. ಈಗಾಗಲೇ ಪರಿಶೀಲನೆಗೆ ಆದೇಶ ಕೂಡ ಆಗಿದೆ ಎಂಬ ಮಾಹಿತಿಯೂ ಇದ್ದು, ಇದೆಲ್ಲ ಗಮನಿಸಲಾಗಿ ನೇಮಕ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಭ್ರಷ್ಟಾಚಾರವೂ ನಡೆದಿರುವ ಗುಮಾನಿ ಶುರುವಾಗಿದೆ. ಆದ್ದರಿಂದ ಪ್ರಕರಣವನ್ನು ತನಿಖೆಗೊಳಪಡಿಸಬೇಕೆಂಬ ಒತ್ತಾಯ ಬಲವಾಗಿ ಕೇಳಿ ಬರುತ್ತಿದೆ.

ಜಿಲ್ಲಾ ಆರೋಗ್ಯ ಇಲಾಖೆಗೆ ಜಿಲ್ಲಾ ಪಂಚಾಯಿತಿ ಸಿಇಒ ಅವರೇ ಉಸ್ತುವಾರಿ. ನಿಯಮಾವಳಿ ಪ್ರಕಾರ ಅವರ ಪೂರ್ವಾನುಮತಿ ಇಲ್ಲದೆ ಆಯ್ಕೆ ಪ್ರಕ್ರಿಯೆ ನಡೆಸುವಂತಿಲ್ಲ. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಇಒ ಅವರೊಂದಿಗೆ ಚರ್ಚಿಸಲಾಗುವುದು.
ಟಿ.ಭೂಬಾಲನ್, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net