

ಕಲಬುರಗಿ: ಸಾರ್ವಜನಿಕರ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ನಗರದ ಜಿಲ್ಲಾ ನ್ಯಾಯಾಲಯ ಆವರಣ ಪ್ರವೇಶಿಸುವವರ ವಕೀಲರು ಹಾಗೂ ಸಾರ್ವಜನಿಕರನ್ನು ಸ್ಕ್ರೀನಿಂಗ್ ಮಾಡಿ, ಅವರ ದೇಹದ ಉಷ್ಣವನ್ನು ಥರ್ಮಲ್ ಗನ್ನಿಂದ ಪರೀಕ್ಷಿಸಿ ಒಳಬಿಡಲಾಗುತ್ತಿದೆ.
ಕರೊನಾ ಪತ್ತೆಯಾದ ಬಳಿಕ ಕೋರ್ಟ್ ಬರುವ ಸಂಖ್ಯೆ ಇಳಿಮುಖವಾಗಿತ್ತು. ಹೀಗಾಗಿ ಗುರುವಾರದಿಂದಲೇ ಈ ಪ್ರಕ್ರಿಯೆ ನಗರದ ಜಿಲ್ಲಾ ನ್ಯಾಯಾಲಯ ಪ್ರವೇಶ ದ್ವಾರದಲ್ಲಿಯೇ ಆರೋಗ್ಯ ಇಲಾಖೆ ಸಿಬ್ಬಂದಿ ಸಾರ್ವಜನಿಕರು, ಕಕ್ಷಿದಾರರು, ವಕೀಲರನ್ನು ಪ್ರಾಥಮಿಕ ತಪಾಸಣೆ ಮಾಡಿಯೇ ಪ್ರವೇಶ ಕಲ್ಪಿಸುತ್ತಿದ್ದಾರೆ.
ದೇಹದಲ್ಲಿ ಉಷ್ಣ ಹೆಚ್ಚಾಗಿ ಅಂದರೆ ಜ್ವರ ಕಂಡು ಬಂದರೆ, ಥರ್ಮಲ್ ಗನ್ ಶಬ್ದದ ಮೂಲಕ ಸೂಚನೆ ನೀಡುತ್ತದೆ. ಅಂತಹವರಿಗೆ ಒಳಗೆ ಪ್ರವೇಶ ನೀಡುತ್ತಿಲ್ಲ. ಬೆಳಗ್ಗೆಯಿಂದ ಸಂಜೆವರೆಗೂ ತಪಾಸಣೆ ಮುಂದುವರಿಸಲಾಗುತ್ತಿದೆ. ಈ ಪರೀಕ್ಷೆಯಿಂದ ಯಾರಿಗೂ ವಿನಾಯಿತಿ ನೀಡುತ್ತಿಲ್ಲ.
ಕಲಬುರಗಿಯ ಜಿಲ್ಲಾ ನ್ಯಾಯಾಲಯದಲ್ಲಿ ಕಕ್ಷಿದಾರರು ಮತ್ತು ವಕೀಲರು ಹಾಗೂ ಸಾರ್ವಜನಿಕರನ್ನು ಸ್ಕ್ರೀನಿಂಗ್ ಮಾಡಿಯೇ ಒಳಬಿಡುವ ಕೆಲಸ ಶುರು ಮಾಡಿದ್ದು ಒಳ್ಳೆಯದು. ಇದರಿಂದ ಸೋಂಕು ಹರಡುವಿಕೆ ಪ್ರಮಾಣ ಇಳಿಕೆಯಾಗಲು ಸಹಕಾರಿಯಾಗಲಿದೆ.
| ಬಸವರಾಜ ಬಿರಾದಾರ ನ್ಯಾಯವಾದಿ ಕಲಬುರಗಿ
ಪರೀಕ್ಷಾರ್ಥಿಗಳಿಗೆ ಸ್ಯಾನಿಟೈಸರ್ನಿಂದ ಕೈ ಶುಚಿ
ಕಲಬುರಗಿ ನಗರದಲ್ಲಿ ದಿನದಿಂದ ದಿನಕ್ಕೆ ಕರೊನಾ ಸೋಂಕು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಗಳು ನಡೆಯುತ್ತಿವೆ. ಇದು ವಿದ್ಯಾರ್ಥಿಗಳು ಹಾಗೂ ಪಾಲಕರಿಗೂ ಬಹಳ ಕಳವಳ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಹೈಕ ಶಿಕ್ಷಣ ಸಂಸ್ಥೆಯ ಎಂ.ಎಸ್. ಇರಾಣಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಹಾಗೂ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಾದ ಐ.ಕೆ. ಪಾಟೀಲ ಹಾಗೂ ಕಾಲೇಜಿನ ಸಿಬ್ಬಂದಿ ಸೇರಿ ಪರೀಕ್ಷಾ ಕೇಂದ್ರದಲ್ಲಿ ಹಾಜರಾದ ಅಂದಾಜು 400 ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಯಾನಿಟೈಸ್ರನ್ನು ನೀಡಿ ಕೈಗಳನ್ನು ಶುಚಿಗೊಳಿಸುವಂತೆ ಪ್ರೇರೆಪಿಸುವುದರ ಜತೆಗೆ ವಿದ್ಯಾರ್ಥಿಗಳಿಗೆ ಕರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿದರು. ಆತಂಕದಲ್ಲಿದ್ದ ವಿದ್ಯಾರ್ಥಿಗಳ ಪಾಲಕರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದರು. ಉಪನ್ಯಾಸಕರಾದ ಚಂದ್ರಶೇಖರ ಪಟ್ಟಣಕರ್, ಶಿಲ್ಪಾ ಕೆ, ಮಲಕಮ್ಮ ಹಾಗೂ ಸಿಬ್ಬಂದಿಯಿದ್ದರು.