ಬಳ್ಳಾರಿ : ಸಿಟಿ ಸ್ಕ್ಯಾನಿಂಗ್, ಎಂಆರ್‌ಐ ಸೇರಿದಂತೆ ಇತರೆ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ನ್ಯೂನತೆ, ಲೋಪದೋಷಗಳು ಕಂಡುಬಂದಲ್ಲಿ ಸಾರ್ವಜನಿಕರು, ರೋಗಿಗಳು ಜಿಲ್ಲಾಧಿಕಾರಿಗಳ ಜಿಲ್ಲಾ ಸಕ್ಷಮ ಪ್ರಾಧಿಕಾರ, ಪಿಸಿ ಮತ್ತು ಪಿಎನ್‌ಡಿಟಿ ಸಮಿತಿಗೆ ಮಾಹಿತಿ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಿಎಚ್ ಒ ಡಾ. ವೈ. ರಮೇಶ್ ಬಾಬು ಹೇಳಿದರು.
ನಗರದ ಜಿಲ್ಲಾಸ್ಪತ್ರೆ ಆವರಣದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಲ್ಲಿ ನಡೆದ ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ತಂತ್ರ ವಿಧಾನಗಳ ಲಿಂಗ ಆಯ್ಕೆ ನಿಷೇಧ ಕುರಿತ ಸಭೆಯಲ್ಲಿ ಅವರು ಮಾತನಾಡಿದರು. ಗರ್ಭಧಾರಣೆ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ(ಪಿಸಿ & ಪಿಎನ್ ಡಿಟಿ) ನಿಷೇಧ ಕಾಯ್ದೆಯನ್ನು ಉಲ್ಲಂಘಿಸುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಪತ್ತೆ ತಂತ್ರ ವಿಧಾನವನ್ನು ಜಿಲ್ಲೆಯಲ್ಲಿ ಪಿಸಿ ಮತ್ತು ಪಿಎನ್‌ಡಿಟಿ ಲಿಂಗ ಆಯ್ಕೆ ನಿಷೇಧ ಕಾಯ್ದೆಯನ್ವಯ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕ್ರಯಬದ್ಧವಾಗಿ ಕಾರ್ಯನಿರ್ವಹಿಸಬೇಕು ಎಂದು ಸಮಿತಿಗೆ ಸೂಚಿಸಿದರು.
ಜಿಲ್ಲೆಯಲ್ಲಿ 76 ಸ್ಕ್ಯಾನಿಂಗ್ ಸೆಂಟರ್‌ಗಳು ನೋಂದಣಿಗೊಂಡು ಕಾರ್ಯ ನಿರ್ವಹಿಸುತ್ತಿವೆ. ಪಿಸಿ ಮತ್ತು ಪಿಎನ್‌ಡಿಟಿ ಸಮಿತಿಯು ಕಳೆದ ಮೂರು ತಿಂಗಳಲ್ಲಿ 72 ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಭೇಟಿ ನೀಡಿದ್ದು, ನ್ಯೂನತೆ ಕಂಡುಬಂದಂತಹ 27 ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ನೋಟಿಸ್ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಲಿಂಗ ಪತ್ತೆ ಪ್ರಕರಣ ಘಟನೆಗಳು ಕಂಡುಬಂದಲ್ಲಿ ಕಾನೂನಿನನ್ವಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ಹೆಣ್ಣು ಭ್ರೂಣ ಲಿಂಗ ಪತ್ತೆಯ ಬಗ್ಗೆ ಖಚಿತ ಮಾಹಿತಿ ನೀಡಿದವರಿಗೆ ರಾಜ್ಯ ಸರ್ಕಾರದ ವತಿಯಿಂದ ಒಂದು ಲಕ್ಷ ಬಹುಮಾನ ನೀಡಲಾಗುತ್ತದೆ ಎಂದರು.