ಸ್ಕೂಲ್ ತೆರೆಯಿರಿ, ನಿತ್ಯವೂ ಬರ್ತೇವೆ

26 BGV manju 1-Web
ಕಿತ್ತೂರು ತಾಲೂಕಿನ ವಿವಿಧ ಸರ್ಕಾರಿ ಶಾಲೆ-ಕಾಲೇಜ್‌ಗಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಶಾಸಕ ಮಹಾಂತೇಶ ದೊಡಗೌಡರ, ಇಲಾಖೆ ಅಧಿಕಾರಿಗಳು ಇದ್ದರು.
Published on

ಬೆಳಗಾವಿ: ‘ಸರ್… ಮನೆಗಿಂತ ಶಾಲೆಯೇ ಬೆಸ್ಟ್. ನಾವೆಲ್ಲರೂ ಕರೊನಾ ನಿಯಂತ್ರಣ ನಿಯಮ ಪಾಲಿಸುತ್ತೇವೆ. ಅಗತ್ಯ ಸುರಕ್ಷತೆಯ ಕ್ರಮ ಕೈಗೊಂಡು ತಾವು ಶಾಲೆಗಳನ್ನು ತೆರೆಯಿರಿ. ನಾವು ನಿತ್ಯವೂ ಶಾಲೆಗೆ ಬರುತ್ತೇವೆ. ಎಂದಿನಂತೆ ಸಂತಸದಿಂದ ಕಲಿಯುತ್ತೇವೆ…’
ಇದು, ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ವಿವಿಧ ಪ್ರೌಢ ಶಾಲೆಗಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಅವರು ಗುರುವಾರ ಭೇಟಿ ನೀಡಿದ್ದ ವೇಳೆ ವಿದ್ಯಾರ್ಥಿಗಳು ವಿನಂತಿಸಿದ ಪರಿ.

ವಿದ್ಯಾರ್ಥಿಗಳ ಸಂತಸ: ಕಿತ್ತೂರಿನ ಸರ್ಕಾರಿ ಬಾಲಕಿಯರ ಹೈಸ್ಕೂಲ್‌ಗೆ ಭೇಟಿ ನೀಡಿದ ಸಚಿವರು ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳಿಗೆ ಇರುವ ಸಮಸ್ಯೆ ಆಲಿಸಿದರು. ಈ ವೇಳೆ ವಿದ್ಯಾರ್ಥಿಗಳು ಮಾತನಾಡಿ, ಇದೀಗ ಭೌತಿಕ ತರಗತಿ ಆರಂಭಿಸಿದ್ದರಿಂದ ನಮಗೆ ಅನುಕೂಲ ಆಗುತ್ತಿದೆ ಎಂದು ಸರ್ಕಾರದ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದರಿಂದ ಸಂತಸಗೊಂಡ ಸಚಿವರು, ‘ನೀವು ಶ್ರಮವಹಿಸಿ ಅಧ್ಯಯನ ಮುಂದುವರಿಸಿ. ನಿಮ್ಮ ಸುರಕ್ಷತೆ, ಕಾಳಜಿ ಸರ್ಕಾರದ್ದು. ನಿಮಗಿರುವ ಎಲ್ಲ ಸಮಸ್ಯೆಗಳನ್ನು ಶೀಘ್ರದಲ್ಲಿಯೇ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಕಾಲೇಜ್‌ಗೆ ರಸ್ತೆ ನಿರ್ಮಿಸಿ: ಕಿತ್ತೂರು ಪಟ್ಟಣದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ಗೆ ಹೋಗಲು ರಸ್ತೆ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಕಾಲೇಜ್ ವಿದ್ಯಾರ್ಥಿಗಳು ಸಚಿವ ನಾಗೇಶ ಅವರಲ್ಲಿ ವಿನಂತಿಸಿದರು. ಇದಕ್ಕೆ ಸ್ಪಂದಿಸಿದ ಸಚಿವ ನಾಗೇಶ, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ಗೆ ಶಾಶ್ವತ ರಸ್ತೆ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುತ್ತೇನೆ. ಅಲ್ಲದೆ, ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸಂಬಂಧಿಸಿದವರಿಗೆ ತಕ್ಷಣ ಸೂಚನೆ ನೀಡುತ್ತೇನೆ ಎಂದು ಭರವಸೆ ನೀಡಿದರು.

ಶಾಸಕ ಮಹಾಂತೇಶ ದೊಡ್ಡಗೌಡರ, ಕ್ಷೇತ್ರ ಶಿಕ್ಷಣಾಧಿಕಾರಿ ರವೀಂದ್ರ ಬಳಿಗಾರ ಇತರರು ಇದ್ದರು.

1ರಿಂದ 8 ಚರ್ಚಿಸಿ ನಿರ್ಧಾರ

1ರಿಂದ 8ನೇ ತರಗತಿ ಆರಂಭಿಸಬೇಕೋ? ಬೇಡವೋ ಎನ್ನುವುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಆ. 30ರಂದು ಚರ್ಚಿಸಿ ನಿರ್ಧರಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ ತಿಳಿಸಿದರು. ಈಗಾಗಲೇ ಆ. 23ರಿಂದ 9ರಿಂದ 12ನೇ ತರಗತಿ ಆರಂಭವಾಗಿದೆ. ಕೋವಿಡ್ 3ನೇ ಅಲೆ ಭೀಕರವಾಗಿದ್ದಲ್ಲಿ ಅನಿವಾರ್ಯವಾಗಿ ಶಾಲೆ ಬಂದ್ ಮಾಡಲಾಗುವುದು. 9 ಮತ್ತು 10ನೇ ತರಗತಿ ಮಕ್ಕಳಿಗೆ ಪೂರ್ಣ ಪ್ರಮಾಣದ ಪುಸ್ತಕ ಲಭ್ಯವಿದ್ದು, ಸೆ. 15ರೊಳಗೆ ಎಲ್ಲ ಶಾಲೆಗಳಿಗೆ ಪುಸ್ತಕ ವಿತರಣೆಯಾಗಲಿದೆ. ಶಿಕ್ಷಕರಿಗೆ ಅನುಕೂಲವಾಗುವಂತೆ ವರ್ಗಾವಣೆ ಮಾಡಲು ಸೆ. 5ರಿಂದ ಕೌನ್ಸೆಲಿಂಗ್ ಆರಂಭಿಸಲಾಗುವುದು. ಶೇ. 90ರಷ್ಟು ಶಿಕ್ಷಕರಿಗೆ ಕೋವಿಡ್ ನಿಯಂತ್ರಣ ಲಸಿಕೆ ನೀಡಲಾಗಿದೆ. ಲಸಿಕೆ ಪಡೆಯದ ಶಿಕ್ಷಕರು ಬೋಧನೆ ಮಾಡುವಂತಿಲ್ಲ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net