

ಹಾಸನ: ಸಕಲೇಶಪುರ: ಸ್ಕೂಟಿ ಡಿಕ್ಕಿಯಲ್ಲಿಟ್ಟಿದ್ದ 2 ಲಕ್ಷ ನಗದು ಹಣವನ್ನು ಕಳವು ಮಾಡಿರುವ ಘಟನೆ ಪಟ್ಟಣದ ಬಿಎಂ ರಸ್ತೆಯಲ್ಲಿರುವ ರಾಘವೇಂದ್ರನಗರ ಬಡಾವಣೆಯ ಕ್ಯಾಂಟೀನ್ ಎದುರು ನಡೆದಿದೆ.
ತಾಲೂಕಿನ ಹಸಿಡೆ ಗ್ರಾಮದ ನಾಗೇಶ ಎಂಬುವರು ಗುರುವಾರ ಮಧ್ಯಾಹ್ನ 12.15 ರ ಸಮಯದಲ್ಲಿ ಬಿ.ಎಂ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಹೋಗಿ ತೋಟದಲ್ಲಿ ಕೆಲಸ ಮಾಡಿದ ಕೆಲಸಗಾರರಿಗೆ ಸಂಬಳ ನೀಡಲು ಅಗತ್ಯವಾದ 2 ಲಕ್ಷ ಹಣವನ್ನು ಬ್ಯಾಂಕಿನಿಂದ ಡ್ರಾ ಮಾಡಿ, ಚಿಕ್ಕ ಬ್ಯಾಗಿನ ಒಳಗೆ ಹಾಕಿ ಸ್ಕೂಟಿಯ ಡಿಕ್ಕಿಯಲ್ಲಿಟ್ಟು, ಲಾಕ್ ಮಾಡಿಕೊಂಡು ಕಾಂಚನಗಂಗಾ ಪ್ಯೂಲ್ ಸ್ಟೇಷನ್ ಮುಂಭಾಗದಲ್ಲಿರುವ ಕ್ಯಾಂಟೀನ್‌ನಲ್ಲಿ ಟೀ ಕುಡಿಯಲು ಹೋಗಿದ್ದರು.
ಟೀ ಕುಡಿದು, ವಾಪಸ್ ಸ್ಕೂಟಿ ಬಳಿ ಬಂದು ಸ್ಕೂಟಿ ಮೇಲೆ ಕುಳಿತು ಹೊರಡಲು ಮುಂದಾದಾಗ ಸಣ್ಣ ಶಬ್ದವಾಯಿತು. ಗಾಬರಿಗೊಂಡು ಸೀಟು ತೆಗೆದು ನೋಡಿದಾಗ ಅದರಲ್ಲಿ ಇಟ್ಟಿದ್ದ 2 ಲಕ್ಷ ನಗದು ಹಣ ಇರಲಿಲ್ಲ. ಪತ್ತೆ ಮಾಡಿಕೊಡಬೇಕೆಂದು ನಗರಠಾಣೆಗೆ ದೂರು ನೀಡಿದ್ದಾರೆ.