

ಬೇಲೂರು: ಗ್ರಾಮದಲ್ಲಿ ಸೌಹಾರ್ದವಾಗಿ ಬದುಕಿದರೆ ಶಾಂತಿ ನೆಲೆಸುತ್ತದೆ ಎಂದು ಅರೇಹಳ್ಳಿ ಪೊಲೀಸ್ ಠಾಣೆ ಅಪರಾಧ ವಿಭಾಗದ ಪಿಎಸ್‌ಐ ಶೋಭಾ ಹೇಳಿದರು.
ಬೇಲೂರು ತಾಲೂಕಿನ ಕಿತ್ತಾವರ ಗ್ರಾಮದ ಸಮುದಾಯ ಭವನದಲ್ಲಿ ಅರೇಹಳ್ಳಿ ಪೊಲೀಸ್ ಠಾಣೆ ಆಯೋಜಿಸಿದ್ದ ಪರಿಶಿಷ್ಟಜಾತಿ ಮತ್ತು ಪಂಗಡಗಳ ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡಿದರು.
ಈ ಗ್ರಾಮದಲ್ಲಿ ಜಾತಿ ಪದ್ಧತಿ ಆಚರಣೆ ಬಗ್ಗೆ ದೂರು ಇಲ್ಲ. ಆದರೂ ಜಾತಿ ಪದ್ಧತಿ ಆಚರಣೆ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಗ್ರಾಮದಲ್ಲಿ ಯಾರೂ ಮೇಲು, ಕೀಳು, ಜಾತಿ ಎಂಬ ತಾರತಮ್ಯ ಮಾಡದೆ ವಿಶ್ವಾಶದಿಂದ ಜೀವನ ಮಾಡಬೇಕು. ಕಷ್ಟ ಸುಖಗಳಲ್ಲಿ ಎಲ್ಲ ವರ್ಗದವರು ಪಾಲ್ಗೊಂಡರೆ ಸಂಬಂಧಗಳು ಗಟ್ಟಿಯಾಗುತ್ತವೆ. ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತಿ ಗಲಾಟೆಗೆ ಕಾರಣವಾಗುವವರ ವಿರುದ್ಧ ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಗ್ರಾಪಂ ಮಾಜಿ ಸದಸ್ಯ ಕೆ.ಎಂ.ಕುಮಾರ್ ಮಾತನಾಡಿ, ನಮ್ಮ ಗ್ರಾಮದಲ್ಲಿ ಜಾತಿ ಪದ್ಧತಿಯ ಆಚರಣೆಗೆ ಅವಕಾಶವಿಲ್ಲ. ಇಲ್ಲಿ ಎಲ್ಲರೂ ಸೌಹಾರ್ದವಾಗಿ ವಾಸಿಸುತ್ತಿದ್ದಾರೆ. ಸಹೋದರತ್ವದಿಂದ ಬದುಕು ಸಾಗಿಸುತ್ತಿದ್ದಾರೆ. ಶಾಂತಿ, ಸೌಹಾರ್ದತೆ ಕಾಪಾಡುವ ಜವಾಬ್ದಾರಿ ನಮ್ಮದಾಗಬೇಕು ಎಂದರು.
ಗ್ರಾಮಸ್ಥರಾದ ನವೀನ್‌ರಾಜ್, ನಿಂಗರಾಜ್, ಪಾಪಾಚಾರಿ, ಮಂಜು, ಪುಟ್ಟಮ್ಮ, ಭಾಗ್ಯ, ಜಯ, ರಂಗಪ್ಪ, ಪ್ರವೀಣ್, ಸಂದೀಪ್, ಹೆಡ್ ಕಾನ್ಸ್‌ಟೇಬಲ್‌ಗಳಾದ ನಂದೀಶ್, ಹನುಮಂತ ಇದ್ದರು.