

ಕಲಬುರಗಿ: ಜಾತಿ, ಧರ್ಮ, ವರ್ಣ ವ್ಯವಸ್ಥೆಯಲ್ಲಿ ಸಿಲುಕಿಸಿ ತಾಯ್ತನ, ಅಂತಃಕರಣ, ಹೃದಯವಂತಿಕೆಗೆ ಗಾಯಗೊಳಿಸಿರುವ ಪ್ರಸ್ತುತ ದಿನಮಾನಗಳಲ್ಲಿ ಬುದ್ದ, ಶರಣ, ಸೂಫಿ ತತ್ವಪದಕಾರರ ಸೌಹಾರ್ದ ವಿಚಾರಗಳೆಂಬ ದಿವ್ಯ ನಾಡ ಔಷಧ ನೀಡಬೇಕಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಭಾನುವಾರ ಹಮ್ಮಿಕೊಂಡ ಕವಯತ್ರಿ ಡಾ.ಫರ್ವಿನ್ ಸುಲ್ತಾನ್ ಅವರ ಶರಣರ ನಾಡಿನ ಸೂಫಿ ಮಾರ್ಗ ಕೃತಿ ಬಿಡುಗಡೆ ಮಾಡಿ ಮಾತನಾಡಿ, ಬೌದ್ಧ, ಮಹಾವೀರ, ಶರಣ, ಸೂಫಿ ಮಾರ್ಗ ಎಲ್ಲವೂ ಒಂದೇ. ಸ್ವತ್ತು ಸೊಕ್ಕಾಗದ ಮುನ್ನ (ಹಣ, ಆಸ್ತಿಯ ಜತೆಗೆ ಜಾತಿ, ಧರ್ಮ) ಅಹಂಕಾರ ನೀಗಿಸಿಕೊಳ್ಳಬೇಕು ಎಂಬುದನ್ನು ಸೂಫಿ ಮಾರ್ಗ ಹೇಳುತ್ತದೆ ಎಂದರು.
ಚಿAತಕಿ ಡಾ.ಮೀನಾಕ್ಷಿ ಬಾಳಿ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶ ಹರ, ಹರಿ, ಹಜರತ್ ಪರಂಪರೆಯ ನಾಡಾಗಿದೆ. ಈ ಮೂರನ್ನೂ ಏಕೀರ್ಭವಿಸಿಕೊಂಡು ಸೌಹಾರ್ದತೆ ಸಾರುವಂತ್ತಿದೆ. ನಮ್ಮದು ಬಹು ಸಂಸ್ಕೃತಿಯ ನಾಡಾಗಿದ್ದು, ಏಕ ಸಂಸ್ಕೃತಿ ಹೇರುವ ಆಟ ಇಲ್ಲಿ ನಡೆಯದು ಎಂದರು.
ವಿಜಯಕುಮಾರ ಪಾಟೀಲ್ ಆಶಯ ಭಾಷಣ ಮಾಡಿದರು. ಲೇಖಕಿ ಫರ್ವಿನ್ ಸುಲ್ತಾನ್ ಮಾತನಾಡಿದರು. ಡಾ.ಡಿ.ಎನ್.ಪಾಟೀಲ್ ನಿರೂಪಣೆ ಮಾಡಿದರು. ಪ್ರೌಢ ಶಾಲೆ ಸಹ ಸಂಘದ ಮಹೇಶ ಹೂಗಾರ, ದೇಸಿ ಪುಸ್ತಕ ಪ್ರಕಾಶನದ ಸೃಷ್ಟಿ ನಾಗೇಶ, ಡಾ.ದತ್ತಾತ್ರೇಯ ಇಕ್ಕಳಕಿ, ಕಸಾಪ ಜಿಲ್ಲಾ ಗೌರವಾಧ್ಯ್ಷಕ ಧರ್ಮಣ್ಣ ಧನ್ನಿ, ಶಿವರಾಜ ಅಂಡಗಿ ಇತರರಿದ್ದರು.