

ಬೆಳಗಾವಿ: ಗಡಿಜಿಲ್ಲೆ ಬೆಳಗಾವಿಯಲ್ಲಿ ಈ ಬಾರಿ ಕುಂದಾನಗರಿ ಗಣೇಶೋತ್ಸವ ಹಲವು ವಿಶೇಷತೆಯಿಂದ ಗಮನ ಸೆಳೆಯುತ್ತಿದ್ದು, ವಿವಿಧ ವಿನಾಯಕ ಪ್ರತಿಷ್ಠಾಪನಾ ಮಂಡಳಿಗಳು, ದೊಡ್ಡ ಅಧಿಕಾರಿಗಳು ಭಾವೈಕ್ಯ ಸಂದೇಶ ಸಾರುವ ಮೂಲಕ ಸೌಹಾರ್ದ ಮೆರೆಯುತ್ತಿರುವುದು ಮಾದರಿಯಾಗಿದೆ.
ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಬುದ್ರುಕ್ ಗ್ರಾಮದಲ್ಲಿ ಹಿಂದು-ಮುಸ್ಲಿಂ ಗಣಪತಿ ಮಂಡಳಿಯಿಂದ ದರ್ಗಾ ಇರುವ ಗಲ್ಲಿಯಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದಾರೆ. ಏಳು ವರ್ಷದ ಹಿಂದೆ ಗ್ರಾಮದ ಹಿಂದು-ಮುಸ್ಲಿಂ ಯುವಕರು ಈ ಗಣೇಶ ಮಂಡಳಿ ಸ್ಥಾಪಿಸಿದ್ದಾರೆ. ಅಂದಿನಿಂದ ಪ್ರತಿ ವರ್ಷ ಗಣೇಶ ಮೂರ್ತಿಯನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿ ಗಣೇಶೋತ್ಸವ ಆಚರಿಸಿಕೊಂಡು ಭಾವೈಕ್ಯ ಸಂದೇಶ ಸಾರುತ್ತಿದ್ದಾರೆ.
ಈದ್ ಮಿಲಾದ್ ಮೆರವಣಿಗೆಗೆ ಮುಂದಕ್ಕೆ: ಬೆಳಗಾವಿಯ ಗಣೇಶೋತ್ಸವ ದೇಶಾದ್ಯಂತ ಹೆಸರುವಾಗಿಯಾಗಿದ್ದು, ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ಲಕ್ಷಾಂತರ ಜನರು ಸೇರುತ್ತಾರೆ. ಈ ಹಿನ್ನೆಲೆಯಲ್ಲಿ ಸೆ.16 ರಂದು ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆಗೆ ತೊಂದರೆಯಾಗದಂತೆ ನಗರದ ಮುಸ್ಲಿಂ ಸಮುದಾಯದ ಮುಖಂಡರು ಸಭೆ ನಡೆಸಿ ಈದ್ ಮಿಲಾದ್ ಮೆರವಣಿಗೆಯನ್ನು ಮುಂದೂಡುವ ಮೂಲಕ ಭಾವೈಕ್ಯ ಸಂದೇಶ ಸಾರಿದ್ದಾರೆ. ಕಳೆದ ವರ್ಷವೂ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಒಟ್ಟಿಗೆ ಬಂದಿದ್ದವು. ಆಗಲೂ ಮೆರವಣಿಗೆ ಮುಂದೂಡಲಾಗಿತ್ತು.
ಅಧಿಕಾರಿಗಳ ನಡೆ ಮಾದರಿ: ಬೆಳಗಾವಿ ನಗರ ಹಾಗೂ ಜಿಲ್ಲಾದ್ಯಂತ ಗಣೇಶ ಹಬ್ಬವನ್ನು ಕೇವಲ ಸಾರ್ವಜನಿಕರಷ್ಟೇ ಆಚರಿಸದೆ ಅಧಿಕಾರಿಗಳು ಭಾವೈಕ್ಯದಿಂದಆಚರಿಸಿ ಮಾದರಿಯಾಗಿದ್ದಾರೆ. ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್ ಹಾಗೂ ಹುಕ್ಕೇರಿ ತಾಲೂಕಿನ ಯಮಕನಮರಡಿ ಪೊಲೀಸ್ ಠಾಣೆಯ ಸಿಪಿಐ ಜಾವೇದ್ ಮುಶಾಪುರೆ ಅವರು ಗಣೇಶ ಮೂರ್ತಿಗಳನ್ನು ಕಚೇರಿಯಲ್ಲಿ ಪ್ರತಿಷ್ಠಾಪಿಸಿ ಸೌಹಾರ್ದ ಮೆರೆದಿದ್ದಾರೆ.
ನಮ್ಮ ಗ್ರಾಮದಲ್ಲಿ ಹಿಂದು-ಮುಸ್ಲಿಮರು ಗಣೇಶ ಹಬ್ಬವನ್ನು 2019ರಿಂದ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಉರುಸ್, ಮೊಹರಂ ಹಬ್ಬಗಳಲ್ಲಿ ಹಿಂದುಗಳೂ ಭಾಗಿಯಾಗಿ ಸಂಭ್ರಮಿಸುತ್ತಾರೆ. ಸಾಮರಸ್ಯ ಬಿತ್ತುವ ನಿಟ್ಟಿನಲ್ಲಿ ಇಂಥ ಪ್ರಯತ್ನಗಳು ಸಹಕಾರಿ. ಇಂಥ ಪ್ರಯತ್ನಗಳನ್ನೂ ಎಲ್ಲರೂ ಬೆಂಬಲಿಸಬೇಕು.| ಅಸ್ಲಂ ಮಾಂಜರೆ, ಉಗಾರ ಬುದ್ರುಕ್ ಹಿಂದು-ಮುಸ್ಲಿಂ ಗಣಪತಿ ಮಂಡಳಿ ಉಪಾಧ್ಯಕ್ಷ