ಸೌಹಾರ್ದ ಸಹಪಂಕ್ತಿ ಭೋಜನ

mysore
Published on

ಮೈಸೂರು: ಎಂಎಲ್‌ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಜನ್ಮದಿನದ ಪ್ರಯುಕ್ತ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ವಿಶ್ವಮೈತ್ರಿ ಬುದ್ಧ ವಿಹಾರದಲ್ಲಿ ಶನಿವಾರ ಪೌರಕಾರ್ಮಿಕರು, ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಸೌಹಾರ್ದ ಸಹಪಂಕ್ತಿ ಭೋಜನ ನಡೆಯಿತು.

ಸಹಪಂಕ್ತಿ ಭೋಜನದಲ್ಲಿ ಸಾಹಿತಿಗಳು, ಪ್ರಗತಿಪರ ಚಿಂತಕರು, ರಾಜಕೀಯ ಮುಖಂಡರು ಪಾಲ್ಗೊಂಡಿದ್ದರು. ಈ ವೇಳೆ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ, ಪೌರಕಾರ್ಮಿಕ ಮಹಿಳೆಯರಿಗೆ ಸೀರೆ ವಿತರಿಸಲಾಯಿತು.

ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಬಿಸಿಯೂಟ ಆರಂಭವಾದರೂ ದಲಿತ ಮಹಿಳೆ ಅಡುಗೆ ಮಾಡುವುದನ್ನು ತಿರಸ್ಕರಿಸುವ ಮನೋಭಾವವೂ ಕಂಡುಬರುತ್ತಿದೆ. ನೂರಾರು ಶಾಲೆಗಳಲ್ಲಿ ಇಂತಹ ಘಟನೆಗಳು ನಡೆದಿವೆ. ದಲಿತರು ಯಾವುದರಲ್ಲಿ ಕಡಿಮೆ ಇದ್ದಾರೆ.

ಉಡುಗೆ, ತೊಡುಗೆ, ಶಿಕ್ಷಣ ಹಾಗೂ ಆರ್ಥಿಕತೆಯಲ್ಲಿ ಸಮರ್ಥರಾಗಿ ಬೆಳೆದಿದ್ದರೂ ಮೇಲ್ಜಾತಿಯವರ ಮನಸ್ಥಿತಿ ಸುಧಾರಿಸಿಲ್ಲ. ದಲಿತ ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆ ತಂದವರಿಗೆ ಕಠಿಣ ಶಿಕ್ಷೆಯಾಗಲಿ ಎಂದು ಆಗ್ರಹಿಸಿದರು.

ಸಮಾಜವು ಇನ್ನೂ ಮೌಢ್ಯದಲ್ಲಿ ಮುಳುಗಿದ್ದು, ಮುನುಷ್ಯನನ್ನು ಮನುಷ್ಯನಂತೆ ನೋಡುವಲ್ಲಿ ದೇಶವೇ ಹಿಂದೆ ಬಿದ್ದಿದೆ ಎಂದು ಕಿಡಿಕಾರಿದರು.

ವಿಶ್ರಾಂತ ಕುಲಪತಿ ಸಬಿಹಾ ಭೂಮಿಗೌಡ, ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್, ರಂಗಕರ್ಮಿ ಜನಾರ್ಧನ ಜನ್ನಿ, ಸಾಹಿತಿಗಳಾದ ಪ್ರೊ.ಕಾಳೇಗೌಡ ನಾಗವಾರ, ಪ್ರೊ.ಕೆ.ಎಸ್.ಭಗವಾನ್, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಸಂವಿಧಾನ ಸಂರಕ್ಷಣಾ ಸಮಿತಿ ಅಧ್ಯಕ್ಷ ಎನ್.ಭಾಸ್ಕರ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net