ಸೌಲಭ್ಯವಿಲ್ಲದೆ ಸೊರಗುತ್ತಿದೆ ವೇಮಗಲ್​ ಸಾರ್ವಜನಿಕ ಆಸ್ಪತ್ರೆ

08 1
Published on

ಆರ್​.ಮುನಿರಾಜು ವೇಮಗಲ್​

ಪಟ್ಟಣದಲ್ಲಿನ ಸಮುದಾಯದ ಆರೋಗ್ಯ ಕೇಂದ್ರ ನಿರ್ಮಾಣವಾಗಿ 4 ತಿಂಗಳು ಕಳೆದರೂ ಜನರ ಉಪಯೋಗಕ್ಕೆ ಇನ್ನು ಲಭ್ಯವಾಗಿಲ್ಲ. ಇದರಿಂದಾಗಿ ಸ್ಥಳಿಯ ಜನ ಆರೋಗ್ಯ ಸೇವೆಯಿಂದ ವಂಚನೆಗೆ ಒಳಗಾಗುತ್ತಿದ್ದಾರೆ. ಸೌಲಭ್ಯಗಳ ಕೊರತೆ ಹಾಗೂ ವೈದ್ಯರ ಕೊರತೆಯಿಂದ ಆಸ್ಪತ್ರೆಯು ಸೊರಗುತ್ತಿದೆ.

ವೇಮಗಲ್​ ಪಟ್ಟಣವೂ ದಿನೇದಿನೆ ಬೆಳೆಯುತ್ತಿದ್ದು, ಈ ಭಾಗದಲ್ಲಿ ಕೈಗಾರಿಕೆಗಳು ಹೆಚ್ಚಾಗಿ ಸ್ಥಾಪನೆಯಾಗಿದ್ದು, ಕಾರ್ಮಿಕರಿಗೆ, ಸಾರ್ವಜನಿಕರಿಗೆ ಆರೋಗ್ಯ ಸೇವೆ ಕಲ್ಪಿಸಬೇಕು ಎಂಬ ಉದ್ದೇಶದಿಂದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೇಗೇರಿಸಿ ಸಮುದಾಯ ಆರೋಗ್ಯ ಕೇಂದ್ರವನ್ನಾಗಿಸಲಾಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್​ ಗುಂಡೂರಾವ್​ ಅವರು 2023ರ ಜುಲೈ 26ರಂದು ಉದ್ಘಾಟಿಸಿ, ಮೂಲ ಸೌಲಭ್ಯಗಳನ್ನು ಕಲ್ಪಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರೇ ಹೊರತು ಅದು ಇನ್ನೂ ಈಡೇರಿಲ್ಲ.

ಸುಸಜ್ಜಿತ ಕಟ್ಟಡ ನಿರ್ಮಾಣವಾಯಿತಾದರು ವೈದ್ಯಕಿಯ ಸಲಕರಣೆಗಳನ್ನು ಒದಗಿಸಿಲ್ಲ. ಇನ್ನು ಅಗತ್ಯವಾಗಿ ಬೇಕಾಗಿರುವ ಶುಶ್ರೂಷಕಿಯರು, ವೈದ್ಯರು, ಪ್ರಯೋಗಾಲಯ ಸಿಬ್ಬಂದಿ ಕೊರತೆಯಿದೆ.ಸಚಿವರು ಕೇವಲ ಆಶ್ವಾಸನೆ ನೀಡಿದರೇ ಹೊರತು ಈ ಭಾಗದ ಜನರಿಗೆ ಪ್ರಯೋಜನವಾಗಲಿಲ್ಲ, ಸಚಿವರ ಮಾತು ಬರೀ ಭರವಸೆಯಾಗೆ ಉಳಿದಿದೆ. ಇದು ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿದೆ.

ವೇಮಗಲ್​ ಹೋಬಳಿ ಕೇಂದ್ರವು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೇಗೇರಿದೆ, ಇದಕ್ಕೆ ಪೂರಕವಾಗಿ ಅಗತ್ಯ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಂಡಿದ್ದು ಹಂತಹಂತವಾಗಿ ಕಲ್ಪಿಸಲಾಗುತ್ತಿದೆ. ಅತಿ ಹೆಚ್ಚು ಕೂಲಿ ಕಾರ್ಮಿಕರು, ಕಾರ್ಮಿಕೆಗಳ ಕಾರ್ಮಿಕರು ಇರುವ ಪಟ್ಟಣದಲ್ಲಿ ಆರೋಗ್ಯ ಕೇಂದ್ರದ ಸೇವೆಯಿಂದ ವಂಚನೆಗೆ ಒಳಗಾಗುವಂತಾಗಿದೆ.

ಏನೇನು ಸಮಸ್ಯೆ?: ಎಕ್ಸರೇ, ಸ್ಕಾ$ನಿಂಗ್​ ಟಕ, ಪ್ರಯೋಗಾಲಯ, ಔಷಧಾಲಯ ಹೀಗೆ ಅನೇಕ ಸೌಲಭ್ಯಗಳು ಮತ್ತು ವೈದ್ಯರ ಕೊರತೆಯಿದೆ. ಬಡ ರೋಗಿಗಳು ತುರ್ತಾಗಿ ಎಕ್ಸರೇ, ಸ್ಕಾ$ನಿಂಗ್​ ಮಾಡಿಸಲು ಜಿಲ್ಲಾ ಕೇಂದ್ರಕ್ಕೆ ಹೋಗುವ ಪರಿಸ್ಥಿತಿ ಇದೆ

ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಕಲ್ಪಿಸಲು ಸರ್ಕಾರವು ಒತ್ತು ನೀಡುತ್ತಿದೆ. ವೇಮಗಲ್​ನಲ್ಲಿ ಹೊಸ ಕಟ್ಟಡವು ಕಾಮಗಾರಿ ಪೂರ್ಣವಾಗಿ ಉದ್ಘಾಟನೆ ಸಹ ಆಗಿದೆ. ಹೊಸ ಹುದ್ದೆಗಳ ಭರ್ತಿಗೆ ಅನುಮತಿಯಾಗಿದೆ. ನಾನು ಮತ್ತು ಶಾಸಕರು ಈಗಾಗಲೇ ಸಚಿವರಾದ ದಿನೇಶ್​ ಗುಂಡೂರಾವ್​ ಬಳಿ ಚರ್ಚಿಸಿದ್ದೇವೆ. ಸದನದಲ್ಲೂ ಸಹ ಪ್ರಸ್ತಾಪಿಸಿದ್ದೇವೆ. ಆದಷ್ಟು ಬೇಗ ಸೌಲಭ್ಯಗಳು ದೊರೆಯುವ ಭರವಸೆ ಇದೆ.

| ಎಂ.ಎಲ್​.ಅನಿಲ್​ ಕುಮಾರ್​ ಎಂಎಲ್​ಸಿ

ಇತ್ತೀಚಿಗೆ ಆರೋಗ್ಯ ಇಲಾಖೆಯ ಮೇಲಾಧಿಕಾರಿಗಳು ಸಮುದಾಯ ಕೇಂದ್ರಕ್ಕೆ ಭೇಟಿ ನೀಡಿ ಅವಶ್ಯ ಸಿಬ್ಬಂದಿ ಹಾಗೂ ಉಪಕರಣಗಳ ಮಾಹಿತಿ ಪಡೆದುಕೊಂಡು ಹೋಗಿದ್ದಾರೆ. ಉಪಕರಣಗಳು ಬಂದ ತಕ್ಷಣ ಉಪಕರಣಗಳ ಅಳವಡಿಲಾಗುವುದು.

|  ಡಾ.ರವಿಕಿರಣ್​ ವೇಮಗಲ್​ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ

ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ಆಗ ಮಾತ್ರ ಸಮಾಜದ ಅಭಿವೃದ್ಧಿಯಾಗಲು ಸಾಧ್ಯ. ವೇಮಗಲ್​ ಬೆಳೆಯುತ್ತಿರುವ ಪಟ್ಟಣವಾಗಿದ್ದು, ಅಗತ್ಯವಾಗಿ ಬೇಕಾಗಿರುವ ಸೌಲಭ್ಯಗಳನ್ನು ಕಲ್ಪಿಸಲು ಜನಪ್ರತಿನಿಧಿಗಳು ಮುಂದಾಗಬೇಕು.

| ವಿ.ಎಂ.ಮುನಿಯಪ್ಪ ತಾಪಂ ಮಾಜಿ ಸದಸ್ಯ, ವೇಮಗಲ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net