

ಬಾಗೇಪಲ್ಲಿ: ಗಡಿದಂ ಪುಣ್ಯಕ್ಷೇತ್ರ ಲಕ್ಷ್ಮೀವೆಂಕಟರಮಣ ಸ್ವಾಮಿ ಸನ್ನಿಧಾನದಲ್ಲಿ ಮದುವೆ, ನಾಮಕರಣ ಸೇರಿ ಇತರ ಶುಭ ಕಾರ್ಯ ನಡೆಸಲು ನಿರ್ಮಾಣವಾಗಿರುವ ‘ಯಾತ್ರಿ ನಿವಾಸ್’ ಸೂಕ್ತ ನಿರ್ವಹಣೆ ಇಲ್ಲದೆ 6 ವರ್ಷಗಳಿಂದ ಅತಂತ್ರ ಸ್ಥಿತಿಯಲ್ಲಿದೆ. ಅಭಿವೃದ್ಧಿಗಾಗಿ ಬಿಡುಗಡೆಯಾದ ಲಕ್ಷಾಂತರ ರೂ. ಅನುದಾನ ದೋಚಲು ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಕುತಂತ್ರ ನಡೆಸಿರುವ ಆರೋಪಗಳು ಕೇಳಿಬಂದಿವೆ.
ಪಟ್ಟಣ ಹೊರವಲಯದಲ್ಲಿರುವ ಗಡಿದಂ ಪುಣ್ಯಕ್ಷೇತ್ರಕ್ಕೆ ಭಕ್ತರು ಹಾಗೂ ಶುಭ ಸಮಾರಂಭ ಮಾಡಲು ಅನುಕೂಲವಾಗಲೆಂದು 6 ವರ್ಷಗಳ ಹಿಂದೆ 50 ಲಕ್ಷ ರೂ. ವೆಚ್ಚದಲ್ಲಿ ಯಾತ್ರಿ ನಿವಾಸ್ ನಿರ್ಮಿಸಲಾಗಿದೆ. ಆದರೆ ಕಟ್ಟಡ ನಿರ್ಮಾಣಕ್ಕೆ ಬಳಕೆ ಮಾಡಲಾಗಿದ್ದ ಪೀಠೋಪಕರಣ ಹಾಗೂ ಶೌಚಗೃಹಕ್ಕೆ ಬಳಸಿದ್ದ ಸಾಮಗ್ರಿಗಳು ಕಳಪೆಯಾಗಿರುವುದಲ್ಲದೆ ಕುಡಿಯುವ ನೀರು ಸೇರಿ ಇತರ ಮೂಲಸೌಕರ್ಯಗಳಿಲ್ಲದ ಕಾರಣ ಯಾರೊಬ್ಬರೂ ಶುಭಕಾರ್ಯಗಳನ್ನು ಮಾಡಿಕೊಳ್ಳಲು ಆಸಕ್ತಿ ತೋರಿಸಲಿಲ್ಲ.
ಯಾತ್ರಿ ನಿವಾಸ್ ಇದ್ದೂ ಇಲ್ಲದಂತಾಗಿದ್ದು, ಬಾಗಿಲು, ಕಿಟಕಿ ಹಾಗೂ ಶೌಚಗೃಹದ ಸಾಮಗ್ರಿಗಳನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ, ಕಟ್ಟಡ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ಪೂರ್ಣಗೊಳ್ಳದ ಕಾಮಗಾರಿ: ಭವನವನ್ನು ಅಭಿವೃದ್ಧಿ ಮಾಡುವ ನೆಪದಲ್ಲಿ 2018-19ನೇ ಸಾಲಿನಲ್ಲಿ ಸರ್ಕಾರದಿಂದ 20 ಲಕ್ಷ ರೂ. ಬಿಡುಗಡೆ ಮಾಡಿಸಿ ಕಾಮಗಾರಿ ಪ್ರಾರಂಭಿಸಲಾಗಿದ್ದು ವರ್ಷದ ಹಿಂದೆಯೇ ಪೂರ್ಣ ಬಿಲ್ ಮಾಡಲಾಗಿದೆ. ಆದರೆ ಇದುವರೆಗೂ ಕಾಮಗಾರಿಗಳು ಪೂರ್ಣಗೊಂಡಿಲ್ಲ, ಮೂಲಸೌಕರ್ಯಗಳನ್ನೂ ಕಲ್ಪಿಸಿಲ್ಲ, ನಾಗರಿಕರ ಬಳಕೆಗೂ ಬಂದಿಲ್ಲ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಅಭಿವೃದ್ಧಿ ನೆಪವೊಡ್ಡಿ ಸರ್ಕಾರಿ ಹಣ ಲೂಟಿ ಹೊಡೆಯುವ ಉದ್ದೇಶಕ್ಕಾಗಿ ಕಾಮಗಾರಿಗಳು ಮಾಡುತ್ತಿರುವ ಆರೋಪಗಳು ಕೇಳಿಬರುತ್ತಿವೆ.
ಗಡಿದಂನಲ್ಲಿರುವ ಯಾತ್ರಿ ನಿವಾಸ್ ಭವನ ಅಭಿವೃದ್ಧಿ ಕಾಮಗಾರಿಗಳ ಬಿಲ್ ಈಗಾಗಲೇ ಮಾಡಲಾಗಿದೆ. ನಿರಾಶ್ರಿತರು ಒಳಗೆ ಹೋಗದಂತೆ ತಡೆಯುವ ಉದ್ದೇಶಕ್ಕಾಗಿ ಕಾಂಪೌಂಡ್ ನಿರ್ಮಿಸಲಾಗಿದೆ. ಅಧಿಕಾರಿಗಳು ಸೂಕ್ತ ನಿರ್ವಹಣೆಗೆ ಆಗತ್ಯವಿರುವ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದಾರೆ. ವಿಜಯಕುಮಾರ್, ಜಿಪಂ ಎಇಇ, ಬಾಗೇಪಲ್ಲಿ.