ಸೌಲಭ್ಯವಿಲ್ಲದ ನಿಲ್ದಾಣದಲ್ಲಿ ಕ್ಯಾಂಟೀನ್

08 kem 1
Published on

ಕೆಂಭಾವಿ: ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಬಡವರ ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಂಟೀನ್ ಕಾಮಗಾರಿ ಭರದಿಂದ ಸಾಗಿದೆ ಆದರೆ ಬಸ್ ನಿಲ್ದಾಣ ಮಾತ್ರ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದ್ದು ಈ ಕ್ಯಾಂಟೀನ್ ಎಷ್ಟರ ಮಟ್ಟಿಗೆ ಸಫಲತೆ ಕಾಣಲಿದೆ ಎಂಬುದು ಕಾದು ನೋಡಬೇಕಾಗಿದೆ.

ಕಳೆದ ಎರಡು ತಿಂಗಳ ಹಿಂದೆ ಪುರಸಭೆ ನೂತನ ಅಧ್ಯಕ್ಷ ರಹೆಮಾನ್ ಪಟೇಲ್ ಅವರಿಂದ ಕಾಮಗಾರಿ ಉದ್ಘಾಟನೆ ಭಾಗ್ಯ ಕಂಡು ಈಗ ಇಂದಿರಾ ಕ್ಯಾಂಟೀನ್ ಪಟ್ಟಣದ ನೂತನ ಬಸ್ ನಿಲ್ದಾಣದಲ್ಲಿ ನಿರ್ಮಾಣವಾಗುತ್ತಿದೆ. ನೂತನ ಬಸ್ ನಿಲ್ದಾಣ ಆರಂಭವಾಗಿ ೨೫ ವರ್ಷ ಗತಿಸಿದ್ದು ಬಸ್ ನಿಲ್ದಾಣ ಮಾತ್ರ ಅಭಿವೃದ್ಧಿಯಿಂದ ವಂಚಿತವಾಗಿದೆ. ಇಡೀ ನಿಲ್ದಾಣ ಧೂಳಿನಿಂದ ಆವರಿಸಿದ್ದು, ಇದೇ ಧೂಳಿನಲ್ಲಿ ಉಪಹಾರ ಸೇವಿಸುವ ಅನಿವಾರ್ಯತೆ ಪ್ರಯಾಣಿಕರಿಗೆ ಎದುರಾಗಲಿದೆಯಾ ಎಂಬ ಪ್ರಶ್ನೆ ಕಾಡುತ್ತಿದೆ. ಮುಖ್ಯವಾಗಿ ನಿಲ್ದಾಣದಲ್ಲಿ ಶೌಚಗೃಹ, ನೀರಿನ ವ್ಯವಸ್ಥೆ ಇಲ್ಲ. ಪ್ರಯಾಣಿಕರ ದಟ್ಟನೆಯಿಂದ ಜಾಗದ ಕೊರತೆ ಸೇರಿ ಹಲವು ಸಮಸ್ಯೆ ಮುಂದಿನ ದಿನಗಳಲ್ಲಿ ಎದುರಿಸುವುದು ಅನಿವಾರ್ಯ ಎನ್ನುವಂತಾಗಿದೆ.

ಅನೇಕ ವರ್ಷಗಳಿಂದ ಹಾಳು ಬಿದ್ದ ಕೊಂಪೆಯAತಾಗಿದ್ದ ಬಸ್ ನಿಲ್ದಾಣ, ಮಹಿಳೆಯರ ಉಚಿತ ಪ್ರಯಾಣದ ಬಲದಿಂದ ಈಗ ಕಳೆಗಟ್ಟಿದೆ. ಆದರೆ ಇಲ್ಲಿ ಸೀಗಬೇಕಾದ ಮೂಲ ಸೌಲಭ್ಯ ಜತೆಗೆ ಬಸ್ ನಿಲ್ದಾಣದಲ್ಲಿ ಡಾಂಬರೀಕರಣ ಮಾಡುವುದು ಮರಿಚಿಕೆಯಾಗಿದೆ. ನಿತ್ಯ ಪಟ್ಟಣ ಸೇರಿ ಗ್ರಾಮೀಣ ಪ್ರದೇಶಗಳಿಗೆ ಇಲ್ಲಿಂದ ಬಸ್‌ಗಳು ಸಂಚರಿಸುತ್ತಿದ್ದು ದೂರದ ಊರಿನಿಂದ ಬರುವ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಇಲ್ಲದೆ ಇರುವುದರಿಂದ ಬಾಟಲಿ ನೀರು ಅನಿವಾರ್ಯತೆ ಎದುರಾಗಿದೆ.

ಮುಖ್ಯವಾಗಿ ಇಲ್ಲಿ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟೀನ್ ಸುತ್ತಲೂ ಧೂಳೂ ಕಸ-ಕಡ್ಡಿಯ ಆವರಿಸಿದ್ದು ಪ್ರಯಾಣಿಕರು ಇಂಥ ಧೂಳಿನಲ್ಲಿಯೇ ಉಪಹಾರ ಸೇವಿಸುವ ಅನಿವಾರ್ಯತೆ ಎದುರಾಗಲಿದೆಯೇ ಎಂಬ ಪ್ರಶ್ನೆ ಪ್ರಯಾಣಿಕರಿಗೆ ಈಗ ಕಾಡಲಾರಂಭಿಸಿದೆ. ಮೊದಲು ಬಸ್ ನಿಲ್ದಾಣ ಅಭಿವೃದ್ಧಿಪಡಿಸಿ ನಂತರ ಕ್ಯಾಂಟೀನ್ ಆರಂಭಿಸಬೇಕು ಎಂಬುದು ಪ್ರಯಾಣಿಕರ ಒತ್ತಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net