ಸೌಲಭ್ಯದಿಂದ ವಂಚಿತರಾಗಲು ಅಧಿಕಾರಿಗಳೇ ಕಾರಣ

14spt2
Published on

ಸೋಮವಾರಪೇಟೆ: ಗಿರಿಜನರ ಹಾಡಿಯಲ್ಲಿ ವಾಸವಿರುವ ಅವಿದ್ಯಾವಂತ ಗಿರಿಜನರು ಸೂಕ್ತ ದಾಖಲಾತಿಯಿಲ್ಲದೆ ಸರ್ಕಾರದ ಸೌಲಭ್ಯದಿಂದ ವಂಚಿತರಾಗುವುದಕ್ಕೆ ಸಂಬಂಧಪಟ್ಟ ಇಲಾಖೆಗಳೇ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಗ್ರಾಮ ಸಭೆಯಲ್ಲಿ ಸಂಕಷ್ಟದಲ್ಲಿರುವ ಸೌಲಭ್ಯವಂಚಿತ ಗಿರಿಜನರ ಬಗ್ಗೆ ಚರ್ಚೆ ನಡೆಯಿತು. ಗಿರಿಜನರ ಹೆಸರಿನಲ್ಲಿ ಅನೇಕ ಅಧಿಕಾರಿಗಳು ಲಕ್ಷದಷ್ಟು ಸಂಬಳ ತಿನ್ನುತ್ತಿದ್ದಾರೆ. ಆದರೆ, ಗಿರಿಜನರ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು. ನಿರ್ಗತಿಕರಾಗಿರುವ ಗಿರಿಜನರು ದಾಖಲಾತಿಗೆ ಅರ್ಜಿ ಸಲ್ಲಿಸಿದರೆ, ಪೂರಕ ದಾಖಲಾತಿ ನೆಪ ಹೇಳಿ ಅರ್ಜಿಯನ್ನು ತಿರಸ್ಕಾರ ಮಾಡುತ್ತಿದ್ದಾರೆ. ಇಲ್ಲಿನವರಿಗೆ ಆಧಾರ್‌ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ ಯಾವುದೂ ಇಲ್ಲ. ಇನ್ನು ಅರಣ್ಯ ಹಕ್ಕುಪತ್ರ ಹೇಗೆ ಪಡೆಯಲು ಸಾಧ್ಯ ಎಂದು ವಾರ್ಡ್ ಸದಸ್ಯ ಅನುಕುಮಾರ್ ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಯ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.

ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಜಂಟಿಯಾಗಿ ಗಿರಿಜನರ ಹಾಡಿಯಲ್ಲಿ ವಾಸ್ತವ್ಯ ಹೂಡಿ, ಗಿರಿಜನರಿಗೆ ಎಲ್ಲ ದಾಖಲಾತಿಯನ್ನು ಮಾಡಿಕೊಡಬೇಕು. ತಪ್ಪಿದಲ್ಲಿ ನೂರು ವರ್ಷ ಕಳೆದರೂ ಗಿರಿಜನರಿಗೆ ಸರ್ಕಾರಿ ಸೌಲಭ್ಯಗಳು ದೊರೆಯುವುದಿಲ್ಲ. ಎಲ್ಲ ಇಲಾಖೆಗಳ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗಿರಿಜನರು ಅನ್ನಕ್ಕಾಗಿ ಪರದಾಡುವಂತಾಗಿದೆ ಎಂದು ಸದಸ್ಯರಾದ ಗೋಪಾಲಕೃಷ್ಣ, ಶಂಕರ, ಗ್ರಾಮಸ್ಥರಾದ ಎಸ್.ಎಂ. ಕೃಷ್ಣ, ಯೋಗೇಶ್ ಕಟುವಾಗಿಯೇ ಟೀಕಿಸಿದರು.

ಗಿರಿಜನರು ಕೊಟ್ಟ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಕಂದಾಯ ಇಲಾಖೆಯ ಅಧಿಕಾರಿಗಳು ತಿರಸ್ಕಾರ ಮಾಡಬಾರದು. ಪೂರಕ ದಾಖಲಾತಿಗಳು ಬೇಕಿದ್ದರೆ, ಗ್ರಾಮಲೆಕ್ಕಿಗರೇ ಸ್ಥಳಕ್ಕೆ ತೆರಳಿ ದಾಖಲಾತಿಗಳನ್ನು ಸಂಗ್ರಹಿಸಿ, ಅರ್ಜಿ ವಿಲೇವಾರಿ ಮಾಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ನಿರ್ದೇಶನ ಮಾಡಬೇಕೆಂದು ಗ್ರಾಮಸಭೆ ಒತ್ತಾಯಿಸಿತು.

ದೊಡ್ಡಮಳ್ತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ 10 ಲಕ್ಷ ರೂ.ಗಳಲ್ಲಿ ಶೌಚಗೃಹ ಹಾಗೂ ರಸ್ತೆ ನಿರ್ಮಾಣವಾಗಿದೆ. ಶೌಚಗೃಹ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಜಿಪಂ ಎಇಇಗೆ ಫೋನ್ ಮಾಡಿದರೆ, ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಎಸ್‌ಡಿಎಂಸಿ ಅಧ್ಯಕ್ಷ ಸತೀಶ್ ದೂರಿದರು. ಜಲಜೀವನ್ ಮಿಷನ್ ಯೋಜನೆಯ ಕುಡಿಯುವ ನೀರಿನ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಇದೊಂದು ಸರ್ಕಾರಿ ಹಣವನ್ನು ತಿನ್ನುವ ಯೋಜನೆಯಾಗಿದೆ ಎಂದು ಸದಸ್ಯ ಗೋಪಾಲಕೃಷ್ಣ ದೂರಿದರು.

ಕಂದಾಯ ಇಲಾಖೆಯ ಕಾರ್ಯ ವೈಖರಿಯಿಂದ ರೈತರು ಹೈರಾಣಾಗಿದ್ದಾರೆ. ನಿಗದಿತ ಸಮಯದಲ್ಲಿ ಯಾವುದೇ ಕೆಲಸವಾಗುತ್ತಿಲ್ಲ. ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರಿಗೆ ಫೋನ್ ಮಾಡಿದರೆ ಅವರು ಫೋನ್ ತೆಗೆದುಕೊಳ್ಳಬಹುದು. ಆದರೆ, ಶನಿವಾರಸಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಫೋನ್ ತೆಗೆದುಕೊಳ್ಳುವುದಿಲ್ಲ ಎಂದು ಸದಸ್ಯ ಗೋಪಾಲ್ ಕೃಷ್ಣ ಆರೋಪಿಸಿದರು. ದೊಡ್ಡಮಳ್ತೆ ಗ್ರಾಮ ಪಂಚಾಯಿತಿಯನ್ನು ಶನಿವಾರಸಂತೆಯಿಂದ ಸೋಮವಾರಪೇಟೆ ಕಸಬಾ ಹೋಬಳಿಗೆ ಸೇರಿಸಲು ಗ್ರಾಮಸಭೆ ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿದರು.

ರೈತಾಪಿ ವರ್ಗ ಹಾಗೂ ಕೂಲಿ ಕಾರ್ಮಿಕರು ಕೆಲಸಕ್ಕೆ ರಜೆ ಹಾಕಿ ಶನಿವಾರಸಂತೆ ಕಂದಾಯ ಇಲಾಖೆಗೆ ಹೋದರೆ, ಉಪ ತಹಸೀಲ್ದಾರ್ ಹಾಗೂ ಕಂದಾಯ ನಿರೀಕ್ಷಕರು ಸಿಗುವುದಿಲ್ಲ. ಮೀಟಿಂಗಿಗೆ ಹೋಗಿದ್ದಾರೆ ಎಂದು ಸಿದ್ಧ ಉತ್ತರ ಸಿಗುತ್ತದೆ. ಶನಿವಾರಸಂತೆ ದಿನ ನಾಡ ಕಚೇರಿಯಲ್ಲಿ ಬೆಳಗ್ಗೆ 10ಗಂಟೆಯಿಂದ ಸಂಜೆ 5 ಗಂಟೆ ತನಕ ಎಲ್ಲ ಅಧಿಕಾರಿಗಳು ಅವರ ಕುರ್ಚಿಯಲ್ಲಿ ಕುಳಿತು ಸಾರ್ವಜನಿಕರ ಕೆಲಸ ಮಾಡಿಕೊಡಬೇಕು ಎಂದು ಗ್ರಾಮಸ್ಥರಾದ ಎಸ್.ಎಂ. ಕೃಷ್ಣ ಒತ್ತಾಯಿಸಿ, ಸಭೆ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗೆ ಕಳುಹಿಸುವಂತೆ ತಿಳಿಸಿದರು. ಸಭೆಯ ನಿರ್ಣಯವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು ಎಂದು ನೋಡೆಲ್ ಅಧಿಕಾರಿ ಸ್ವಾಮಿ ಸಭೆಗೆ ತಿಳಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಕೆರೆಗಳು ಒತ್ತುವರಿಯಾಗಿದ್ದು, ಒತ್ತುವರಿ ತೆರವು ಕೆಲಸವನ್ನು ಕಂದಾಯ ಇಲಾಖೆ ಮಾಡಬೇಕೆಂದು ಸದಸ್ಯರಾದ ಗೋಪಾಲಕೃಷ್ಣ, ಪ್ರಮೀಳಾ ಒತ್ತಾಯಿಸಿದರು.

ಗ್ರಾಮೀಣ ಭಾಗದಲ್ಲಿ ಅಂಗಡಿಗಳಲ್ಲಿ, ಕೆಲ ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಅಬಕಾರಿ ಇಲಾಖೆಗೆ ಮಾಹಿತಿ ಕೊಟ್ಟರೆ, ದೂರುದಾರರ ಹೆಸರುಗಳನ್ನು ಅಕ್ರಮ ಮದ್ಯ ದಂಧೆಕೋರರಿಗೆ ತಿಳಿಸುತ್ತಿದ್ದಾರೆ. ಇದರಿಂದ ಜೀವಬೆದರಿಕೆ ಹಾಕಿಸಿಕೊಳ್ಳಬೇಕಾದ ಸಂಕಷ್ಟ ಬಂದಿದೆ ಎಂದು ಗೃಹಿಣಿ ನಾಗಮಣಿ ಅಸಮಾಧಾನ ವ್ಯಕ್ತಪಡಿಸಿದರು. ಇಲಾಖೆಯ ಕೆಲ ಅಧಿಕಾರಿಗಳಿಗೆ ‘ಮಾಮೂಲು’ ಸೇರುತ್ತಿರುವುದರಿಂದ ಅಕ್ರಮಕ್ಕೆ ಅಧಿಕಾರಿಗಳ ಪ್ರೋತ್ಸಾಹ ಇದೆ ಎಂದು ಗೋಪಾಲಕೃಷ್ಣ, ಕೃಷ್ಣ, ಶಂಕರ ಮತ್ತಿತರು ಹೇಳಿದರು. ಇಲಾಖೆಗೆ ತಕಾತ್ತು ಇದ್ದರೆ ನಾಳೆಯಿಂದ ಅಕ್ರಮ ಮದ್ಯ ಮಾರಾಟ ಮಾಡುವ ಅಂಗಡಿಗಳಿಗೆ ದಾಳಿ ನಡೆದ ಮೊಕದ್ದಮೆ ದಾಖಲಿಸಲಿ ಎಂದು ಸವಾಲು ಹಾಕಿದರು. ಅಬಕಾರಿ ಇಲಾಖೆ ಅಲ್ಲಲ್ಲಿ ಮೊಕದ್ದಮೆ ದಾಖಲಿಸಿದೆ. ದೂರುದಾರರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಉಪನಿರೀಕ್ಷರಾದ ಸುಮತಿ ಸಭೆಗೆ ತಿಳಿಸಿದರು.

ಸಭೆಯಲ್ಲಿ ವಿವಿಧ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು. ಅಧ್ಯಕ್ಷರಾದ ಕೆ.ಎಂ. ಬಿಂದು, ಉಪಾಧ್ಯಕ್ಷರಾದ ರಶಿದಾ, ಸದಸ್ಯರಾದ ರುದ್ರಪ್ಪ, ವೀಣಾ, ಭಾಗ್ಯಾ, ಪಿಡಿಒ ಹರೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net