

ಚಿತ್ರದುರ್ಗ: ಸರ್ಕಾರ ಸವಲತ್ತುಗಳನ್ನು ಪಡೆಯಲು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿರುವ ಕಾರ್ಮಿಕರು ತಮ್ಮ ಗುರುತಿನ ಚೀಟಿಯನ್ನು ಕಾಲ ಕಾಲಕ್ಕೆ ನವೀಕರಿಸುವ ಅಗತ್ಯವಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ ಬಾಲಚಂದ್ರ ಬಗಟಿ ಹೇಳಿದರು.
ರಾಜ್ಯಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್, ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಜಿಲ್ಲಾ ಸಮಿತಿಯಿಂದ ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಕಟ್ಟಡ ನಿರ್ಮಾಣ ಕಾರ್ಮಿಕರ 7 ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸರ್ಕಾರ ಈಚೆಗೆ ಕಟ್ಟಡ ಕಾರ್ಮಿಕರು ಹಾಗೂ ಅವರ ಕುಟುಂಬ ವರ್ಗದವರಿಗೆ ವಿವಿಧ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ. ಆದ್ದರಿಂದ ಮರೆಯದೇ ಗುರುತಿನ ಚೀಟಿ ನವೀಕರಣ ಮಾಡಿಕೊಳ್ಳಬೇಕು. ಕಾರ್ಡ್ ನವೀಕರಣವಾಗದಿದ್ದರೆ ಸೌಲಭ್ಯಗಳಿಂದ ವಂಚಿರಾಗಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಸಂಘಟನೆಗಳು ಕೂಡ ಈ ನಿಟ್ಟಿನಲ್ಲಿ ಗಮನ ಹರಿಸಬೇಕೆಂದರು.
ಕಾರ್ಮಿಕ ನಿರೀಕ್ಷಕ ಪಿ.ಭೀಮೇಶ್ ಮಾತನಾಡಿ, ಸರ್ಕಾರದ ಸೌಲಭ್ಯಗಳು ಹಾಗೂ ಕಾನೂನುಗಳ ತಿದ್ದುಪಡಿ ಮಾಹಿತಿ ಅರಿಯುವಂತೆ ಕಾರ್ಮಿಕರಿಗೆ ಸಲಹೆ ನೀಡಿದರು.
ಫೆಡರೇಷನ್ ಗೌರವ ಅಧ್ಯಕ್ಷ ಅಬ್ದುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ಬಿ.ಉಮೇಶ್, ಸಿಐಟಿಯು ಜಿಲ್ಲಾ ಮುಖ್ಯಸಂಚಾಲಕ ತಿಪ್ಪೇಸ್ವಾಮಿ, ಸಂಚಾಲಕ ಸಿ.ಕೆ.ಗೌಸ್‌ಪೀರ್, ನಾಗಮ್ಮ, ಹನುಮಂತಪ್ಪ ಹಬೀಬ್‌ಉಲ್ಲಾ, ಮುಬಾರಕ್, ಅಬ್ದುಲ್ಲಾ ಎಂ.ಕೆ.ಹಟ್ಟಿ, ಶೇಖ್‌ಕಲೀಮ್‌ಉಲ್ಲಾ ಇತರರು ಇದ್ದರು.