

ವಿರಾಜಪೇಟೆ: ತಾಲೂಕು ಕೇಂದ್ರ ವಿರಾಜಪೇಟೆಯಿಂದ ಕೇವಲ 8 ಕಿಮೀ ದೂರದಲ್ಲಿದ್ದರೂ ಕುಗ್ರಾಮವಾಗಿಯೇ ಗುರುತಿಸಿಕೊಂಡಿರುವ ಗ್ರಾಮ ತೋಮರ.
ಕೆದಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ತೋಮರ ಗ್ರಾಮ ಜನರ ಆಡುಭಾಷೆಯಲ್ಲಿ ತೋರ ಎಂದಾಗಿದೆ. 2019ರ ಭೀಕರ ಭೂಕುಸಿತಕ್ಕೆ ಸಾಕ್ಷಿಯಾಗಿದ್ದ ಗ್ರಾಮ ಈಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ.
ತೋಮರದಲ್ಲಿ ಸುಮಾರು 1,200 ಜನರು ವಾಸವಿದ್ದು, ಇದರಲ್ಲಿ ಬುಡಕಟ್ಟು ಜನರೂ ಸೇರಿದ್ದಾರೆ. ಇದು ಕೃಷಿ ಪ್ರಧಾನ ಗ್ರಾಮವಾಗಿದ್ದು, ಬಹುತೇಕರು ಇಲ್ಲಿ ಕಾಫಿತೋಟ ಹೊಂದಿದ್ದಾರೆ. ಗ್ರಾಮದ ಆನೆಪಾರೆ ಬೆಟ್ಟದ ಒಂದು ಭಾಗ ತೋರ ಪ್ರದೇಶದಲ್ಲಿ ವಾಸವಿದ್ದ ಕುಟುಂಬದ ಮೇಲೆ 2019ರಲ್ಲಿ ಕುಸಿದ ಪರಿಣಾಮ ಹತ್ತು ಜನರು ಮೃತಪಟ್ಟಿದ್ದು, ಐವರ ಶವ ಪತ್ತೆಯಾಗಲೇ ಇಲ್ಲ. ಹಸಿರು ಹೊದಿಕೆಯ ಆನೆಪಾರೆ ಬೆಟ್ಟದ ಬುಡದಲ್ಲಿ ತೋಮರ ಗ್ರಾಮವಿದೆ.
ತೋಮರ ಪ್ರದೇಶಕ್ಕೂ ಮೊದಲು ಕೀರ್ತಿ ಹೊಳೆ ಕಾಣಸಿಗುತ್ತದೆ. ತೋಮರ ಜಲಪಾತದಿಂದ ನೀರು ಕೀರ್ತಿಹೊಳೆಗೆ ಹರಿದು ಬರಲಿದ್ದು, 2019ರಲ್ಲಿ ಇದೇ ಕೀರ್ತಿಹೊಳೆ ಉಕ್ಕಿ ಹರಿದು ಗ್ರಾಮದ ಜನರನ್ನು ಜಲದಿಗ್ಭಂದನದಲ್ಲಿ ಇರಿಸಿತ್ತು. ಇಂತಹ ಗ್ರಾಮಕ್ಕೆ ಹೋಗುವುದೇ ಒಂದು ದೊಡ್ಡ ಸಾಹಸ. ಇಲ್ಲಿಗೆ ಒಂದು ಸರ್ಕಾರಿ ಬಸ್ ಸಂಚಾರವಿದ್ದು, ಅದನ್ನು ಹೊರತುಪಡಿಸಿದರೆ ಆಟೋಗೆ 100-150 ರೂ. ಕೊಟ್ಟು ಓಡಾಡಬೇಕಾದ ಪರಿಸ್ಥಿತಿ ಇದೆ.
ಈ ಪ್ರದೇಶದಲ್ಲಿ ಕಾಡಾನೆಗಳು ಒಂದು ರೀತಿಯಲ್ಲಿ ಬೀದಿ ಪ್ರಾಣಿಗಳಂತಾಗಿವೆ. ಜನವಸತಿ ಪ್ರದೇಶದಲ್ಲೇ ಆನೆಗಳು ಬೀಡುಬಿಟ್ಟಿವೆ. ಇಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಿದ್ದು, ವರ್ಷದಿಂದ ವರ್ಷಕ್ಕೆ ದಾಖಲಾತಿ ಕಡಿಮೆ ಆಗುತ್ತಿದೆ. ಇದೆಲ್ಲದರ ನಡುವೆ ಆನೆಗಳ ಹಾವಳಿಯಿಂದಾಗಿ ಮಕ್ಕಳು ನಿತ್ಯ ಶಾಲೆಗೆ ಬರಲಾಗುತ್ತಿಲ್ಲ. ಇದರಿಂದಾಗಿ ತೋಮರ, ಪಡಚ್ಚಿಕಾಡು ಪ್ರದೇಶದಲ್ಲಿ ವರ್ಷದಿಂದ ವರ್ಷಕ್ಕೆ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ.
ಗ್ರಾಮದಲ್ಲಿ ಮೊಬೈಲ್ ಸಿಗ್ನಲ್ ಸಿಗುವುದು ಕಷ್ಟ. ಊರಿನಲ್ಲಿರುವ ಒಂದು ಮೊಬೈಲ್ ಟವರ್ ಕರೆಂಟ್ ಇದ್ದರೆ ಮಾತ್ರ ಕೆಲಸ ಮಾಡುತ್ತದೆ. ಹಾಗಾಗಿಯೇ ತೋರದಲ್ಲಿ ಸಂಭವಿಸಿದ ಭೂಕುಸಿತದ ಸುದ್ದಿ 8 ಕಿಮೀ ದೂರದ ವಿರಾಜಪೇಟೆ ತಲುಪಲು 4 ಗಂಟೆ ಬೇಕಾಯಿತು.
ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಅನುಷ್ಠಾನ ಮಾಡಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ ತೋಮರ, ಪಡಚ್ಚಿಕಾಡು ಕಾಲನಿ ಜನರಿಗೆ ಕುಡಿಯುವ ನೀರಿಗೆ ತತ್ವಾರವಿದೆ ಎನ್ನುವುದು ಕಾಲನಿ ಜನರ ಅಳಲು. ಕಾಡುಪ್ರಾಣಿಗಳ ಕಾಟಕ್ಕೆ ಬೇಸತ್ತು ಸ್ಥಳೀಯರು ಗದ್ದೆ ಮಾಡುವುದನ್ನೇ ಬಿಟ್ಟಿದ್ದಾರೆ. ಅರಣ್ಯ ಇಲಾಖೆ ವತಿಯಿಂದ ಕೋಟ್ಯಂತರ ರೂ. ವೆಚ್ಚದಲ್ಲಿ ಕಂದಕಗಳನ್ನು ನಿರ್ಮಾಣ ಮಾಡಲಾಗಿದೆಯಾದರೂ ನಿಗದಿತ ಸ್ಥಳದಲ್ಲಿ ಕಂದಕ ನಿರ್ಮಾಣ ಮಾಡದ ಹಿನ್ನೆಲೆಯಲ್ಲಿ ಇಪ್ಪತ್ತರಿಂದ ಇಪ್ಪತೈದು ಆನೆಗಳು ತೋಟದಲ್ಲಿಯೇ ಉಳಿಯುವಂತಾಗಿದೆ. ಜತೆಗೆ ತೋಟದ ಆನೆಗಳಾಗಿ ಮಾರ್ಪಾಡಾಗಿವೆ. ಕಾಡುಹಂದಿಗಳ ಸಂಖ್ಯೆಯೂ ಹೆಚ್ಚಾಗಿ ಕೃಷಿಕರನ್ನು ಕಾಡುತ್ತಿದೆ.
ತೋಮರದಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳ ಜಲಪಾತ, ಆಂಜನೇಯನ ದೇವಾಲಯವೂ ಇದೆ. ದೇವಾಲಯಕ್ಕೆ ಸಂಬಂಧಿಸಿದ ದೇವರಕಾಡು, ಆಂಜನೇಯ ವನ ಕೂಡ ಇದ್ದು, ಕೊಡಗಿನ ಬಹತೇಕ ಜನರಿಗೆ ಪರಿಚಿತವಿಲ್ಲದ ಈ ಜಲಪಾತ ಪ್ರವಾಸೋದ್ಯಮ ಇಲಾಖೆ ಗುರುತಿದರೆ ಉತ್ತಮ ಪ್ರವಾಸಿತಾಣ ಆಗಬಹುದು.
ತೋಮರ ಭೀಕರ ಭೂಕುಸಿತವಾದಾಗ ಇಡೀ ರಾಜ್ಯವೇ ಈ ಗ್ರಾಮದ ಪರಿಸ್ಥಿತಿ ಕಂಡು ಮರುಗಿತ್ತು. ಇದೀಗ ನಿಧಾನವಾಗಿ ಈ ಪ್ರದೇಶ ಭೂಕುಸಿತದ ಭಯದಿಂದ ಚೇತರಿಕೆ ಕಂಡುಕೊಳ್ಳುತ್ತಿದೆ. ಕಗ್ಗಾಡಾಗಿರುವ ಈ ಪ್ರದೇಶದಲ್ಲಿ ಸಣ್ಣಪುಟ್ಟ ವ್ಯವಸ್ಥೆಗಳ ನಡುವೆ ಇಲ್ಲಿನ ಜನತೆ ಬದುಕು ದೂಡುತ್ತಿದ್ದಾರೆ. ಸರ್ಕಾರ ಇಲ್ಲಿ ಜನಜೀವನಕ್ಕೆ ಬೇಕಾದ ಅಗತ್ಯ ವ್ಯವಸ್ಥೆ ಮಾಡಬೇಕಾದ ಅನಿವಾರ್ಯತೆ ಇದೆ.
ಕಾಲನಿಯಲ್ಲಿರುವ ಜನರಿಗೆ ಸರ್ಕಾರದ ಅಗತ್ಯ ಸೇವೆ ದೊರಕುತ್ತಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಆಗುವುದರ ಜತೆಗೆ ಕಾಡಾನೆ ಹಾವಳಿ ತಪ್ಪಬೇಕು. ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರ ನೇಮಕ ಆಗಬೇಕು.
ರಾಮಪ್ಪ ಸದಸ್ಯ, ಕೆದಮುಳ್ಳೂರು ಗ್ರಾಮ ಪಂಚಾಯಿತಿ
ಈ ವರ್ಷ ವಾಡಿಕೆಗಿಂತ ಮಳೆ ಕಡಿಮೆಯಾಗಿದೆ. ಸದ್ಯದ ಮಟ್ಟಿಗೆ ತೋಟ, ಗದ್ದೆಯಲ್ಲಿನ ಜಲಮೂಲಗಳಿಗೆ ಪೈಪ್ ಹಾಕಿಕೊಂಡು ನೀರು ಪಡೆಯುತ್ತಿದ್ದೇವೆ. ಆದರೆ ಸೆಪ್ಟೆಂಬರ್, ಅಕ್ಟೋಬರ್ ವೇಳೆಗೆ ಕುಡಿಯುವ ನೀರಿಗೆ ತೊಂದರೆ ಆಗಲಿದೆ. ಸರ್ಕಾರದ ಮಟ್ಟದಲ್ಲಿ ನಮ್ಮ ಗ್ರಾಮಕ್ಕೆ ಸರಿಯಾದ ರೀತಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಆಗುವಂತೆ ಮಾಡಬೇಕು. ಕಾಡಾನೆ ಹಾವಳಿ ಹೆಚ್ಚಾಗಿದೆ, ಸರ್ಕಾರ ಇತ್ತ ಗಮನಹರಿಸಬೇಕು. ಜತೆಗೆ ರಸ್ತೆ ಬದಿ ಚರಂಡಿ ವ್ಯವಸ್ಥೆ ಆಗಬೇಕು.
ತಿಮ್ಮಪ್ಪ ಅಧ್ಯಕ್ಷ, ವನಭದ್ರಕಾಳಿ ದೇವಾಲಯ, ತೋಮರ ಗ್ರಾಮ
ವಿರಾಜಪೇಟೆ ತಾಲೂಕಿನ ಕುಗ್ರಾಮದಲ್ಲಿರುವ ಬೆಟ್ಟಗುಡ್ಡ ಪ್ರದೇಶದಲ್ಲಿ ಶಾಲೆಯಿದ್ದು, ಬಸ್ ವ್ಯವಸ್ಥೆ ಸರಿಯಾಗಿಲ್ಲ. ಈ ವರ್ಷ ಮಕ್ಕಳ ದಾಖಲಾತಿ ಕಡಿಮೆ ಆಗಿದೆ. ಪ್ರಸಕ್ತ ಸಾಲಿನಲ್ಲಿ ಇಪ್ಪತ್ತು ಮಕ್ಕಳಿದ್ದು, ಮಕ್ಕಳು ಶಾಲೆಗೆ ಹೆದರಿಕೆಯಲ್ಲೇ ಬರುತ್ತಾರೆ ಹಾಗೂ ಹೋಗುತ್ತಾರೆ.
ಬಿ.ಕೆ ವಸಂತಿ ಮುಖ್ಯ ಶಿಕ್ಷಕಿ, ತೋಮರ ಶಾಲೆ
ಮೊಬೈಲ್ ನೆಟ್‌ವರ್ಕ್ ಇರುವುದಿಲ್ಲ. ಅಲ್ಲದೆ, ಕಾಡಾನೆ ಹಾವಳಿಯಿಂದ ಭತ್ತ ಬೆಳೆಯಲಾಗುತ್ತಿಲ್ಲ. ಪುರಾತನ ಕಾಲದ ಪೌರಾಣಿಕ ಇತಿಹಾಸವಿರುವ ದೇವಾಲಯಗಳು ಇಲ್ಲಿದ್ದು, ಸರ್ಕಾರ ಅವುಗಳನ್ನು ರಕ್ಷಿಸುವ ಮತ್ತು ಅಭಿವೃದ್ಧಿಪಡಿಸುವ ಕೆಲಸಕ್ಕೆ ಮುಂದಾಗಬೇಕು.
ಕೀತಿಯಂಡ ಮುದ್ದಪ್ಪ ಅಧ್ಯಕ್ಷ, ಆಂಜನೇಯ ದೇವಾಲಯ ಆಡಳಿತ ಮಂಡಳಿ
ಕಾಡಾನೆ ಹಾವಳಿಯನ್ನು ನಿಯಂತ್ರಣ ಮಾಡದಿದ್ದರೆ ಕೆಲವೇ ವರ್ಷಗಳಲ್ಲಿ ಜನರು ಇಲ್ಲಿ ಬದುಕುವುದು, ಕೃಷಿ ಮಾಡುವುದು ಕನಸಿನ ಮಾತಾಗಲಿದೆ. ಭೂಕುಸಿತವಾದಾಗ ಸಮೀಪದಲ್ಲಿರುವ ವಿರಾಜಪೇಟೆಗೆ ವಿಷಯ ತಿಳಿಯಲು ನಾಲ್ಕು ತಾಸು ತಡವಾಯಿತು. ಹಾಗಾಗಿ ಮೊಬೈಲ್ ನೆಟ್‌ವರ್ಕ್ ಸರಿಪಡಿಸುವ ಕೆಲಸ ಶೀಘ್ರ ಆಗಬೇಕು.
ಮಾಳೇಟಿರ ಜೀವನ್, ಕೆದಮುಳ್ಳೂರು ನಿವಾಸಿ