

ರಾಮದುರ್ಗ: ಸರ್ಕಾರದ ಯೋಜನೆಗಳ ಲಾಭ ಪಡೆಯಲು ಬ್ಯಾಂಕ್ ಖಾತೆ ಅಗತ್ಯವಾಗಿದ್ದು, ಸಾರ್ವಜನಿಕರು ಈ ವಿಚಾರದಲ್ಲಿ ವಿಳಂಬ ಮಾಡಬಾರದು ಎಂದು ಕೆನರಾ ಬ್ಯಾಂಕ್ ಹಿರಿಯ ಶಾಖಾ ಪ್ರಬಂಧಕ ಇಮ್ರಾನ್ ಸೈಯದ್ ಕಿವಿಮಾತು ಹೇಳಿದರು. ತಾಲೂಕಿನ ದುರ್ಗಾ ನಗರದಲ್ಲಿ ಕೆನರಾ ಬ್ಯಾಂಕ್, ಅಮೂಲ್ಯ ಆರ್ಥಿಕ ಸಾಕ್ಷರತೆ ಕೇಂದ್ರ, ಆರೋಗ್ಯ ಇಲಾಖೆ ಹಾಗೂ ಎಫ್‌ಐಸಿಸಿಐ ಸಂಸ್ಥೆ ವತಿಯಿಂದ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಶುಕ್ರವಾರ ಹಮ್ಮಿಕೊಂಡಿದ್ದ ಆರ್ಥಿಕ ಸಾಕ್ಷರತೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಯಾವ ಉದ್ದೇಶಕ್ಕೆ ಸಾಲ ಪಡೆಯುತ್ತಿರೋ ಅದೇ ಉದ್ದೇಶಕ್ಕೆ ಬಳಸಿಕೊಂಡರೆ ನಿರೀಕ್ಷಿತ ಆದಾಯ ಬರುತ್ತದೆ. ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಲು ಸಾಧ್ಯವಾಗುತ್ತದೆ ಎಂದರು. ಅಮೂಲ್ಯ ಆರ್ಥಿಕ ಸಾಕ್ಷರತೆ ಕೇಂದ್ರದ ಸಮಾಲೋಚಕ ಮಲ್ಲಿಕಾರ್ಜುನರಡ್ಡಿ ಗೊಂದಿ ಮಾತನಾಡಿ, ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮೆ, ಸುರಕ್ಷಾ ವಿಮೆ, ಎಪಿವೈ, ಸುಕನ್ಯಾ ಸಮೃದ್ಧಿ ಸೇರಿ ವಿವಿಧ ಯೋಜನೆಗಳ ಮಾಹಿತಿ ನೀಡಿದರು. ಆರೋಗ್ಯ ಇಲಾಖೆಯ ಶಿವಾನಂದ ಚಂದರಗಿ, ಗ್ರಾಪಂ ಮಾಜಿ ಅಧ್ಯಕ್ಷ ವಿಜಯಕುಮಾರ ರಾಠೋಡ, ಮಾರುತಿ ಕುಂದ್ರಾಳ, ಲಕ್ಷ್ಮೀ ರಾಠೋಡ, ಪ್ರಿಯಾಂಕ ರಾಠೋಡ, ಇಂದಿರಾ ಲಮಾಣಿ ಇತರರು ಇದ್ದರು.