ಸೌಲಭ್ಯ ವಂಚಿತ ಶರಣನಗರ

Sharan nagar
Published on

ಬಸವಕಲ್ಯಾಣ: ತಾಲೂಕಿನ ಕಿಣ್ಣಿ ಶರಣನಗರ ಗ್ರಾಮದಲ್ಲಿ ಸಿಸಿ ರಸ್ತೆ, ಚರಂಡಿ ಸೇರಿದಂತೆ ವಿವಿಧ ಸೌಲಭ್ಯ ಒದಗಿಸಬೇಕೆಂದು ಶ್ರೀ ಶರಣಬಸವೇಶ್ವರ ಪಂಚ ಕಮಿಟಿ ಆಗ್ರಹಿಸಿದೆ.

ಈ ಕುರಿತು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದ ಕಮಿಟಿ ಕಾರ್ಯದರ್ಶಿ ಉಮಾಕಾಂತ ಮಾನಕಾರ, ಮುಡಬಿ ಗ್ರಾಪಂಗೆ ಒಳಪಡುವ ಶರಣನಗರ ಸೌಲಭ್ಯ ವಂಚಿತ ಗ್ರಾಮವಾಗಿದೆ. ಹಲವು ಬಾರಿ ಸ್ಥಳೀಯ ಜನಪ್ರತಿನಿಧಿ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆಯಾಗಿಲ್ಲ ಎಂದು ದೂರಿದ್ದಾರೆ.

ಗ್ರಾಮದಲ್ಲಿ ನೀರು ಶುದ್ಧೀಕರಣ ಘಟಕ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿದೆ. ಈಗಾಗಲೇ ಮಾಡಿರುವ ಕಾಮಗಾರಿ ಸಹ ಹಾಳಾಗಿದೆ. ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಿ ಕಾಮಗಾರಿ ಪೂರ್ಣ ಮಾಡಬೇಕು. ಗ್ರಾಮದಲ್ಲಿ ಸರಿಯಾದ ಸಿಸಿ ರಸ್ತೆ, ಚರಂಡಿ ಇಲ್ಲದ ಕಾರಣ ಸಾರ್ವಜನಿಕರು ಓಡಾಡಲು ಕಷ್ಟಪಡಬೇಕಾಗಿದೆ. ಚರಂಡಿ ಇಲ್ಲದ ಕಾರಣ ಹೊಲಸು ನೀರು ರಸ್ತೆ ಮೇಲೆ ಹರಿದಾಡುತ್ತ ಸಾಂಕ್ರಾಮಿಕ ರೋಗ ಭೀತಿ ಆವರಿಸಿದೆ. ಕೂಡಲೇ ಸಿಸಿ ರಸ್ತೆ, ಚರಂಡಿ ನಿರ್ಮಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಇಲ್ಲದ ಕಾರಣ ಒಣ ಬೇಸಾಯ ಮಾಡುತ್ತಿದ್ದಾರೆ. ಮುಲ್ಲಾಮಾರಿ ಮೇಲ್ದಂಡೆ ಜಲಾಶಯದಿಂದ ಗ್ರಾಮದ ಜಮೀನುಗಳಿಗೆ ಏತ ನೀರಾವರಿ ಯೋಜನೆ ಅಡಿಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಬೇಕು. ಶರಣನಗರ ಗ್ರಾಮದಿಂದ ಹಿರನಾಗಾಂವ ಮಾರ್ಗದ ಹಾಳಾದ ರಸ್ತೆ ಕೂಡಲೇ ಡಾಂಬರೀಕರಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಮುಲ್ಲಾಮರಿ ಮೇಲ್ದಂಡೆ ಜಲಾಶಯದಲ್ಲಿ ನಾಲ್ಕು ದಶಕ ಹಿಂದೆ ಕಿಣ್ಣಿ ಶರಣನಗರ ಗ್ರಾಮವನ್ನು ಸಂಪೂರ್ಣ ಸ್ವಾಧೀನಪಡಿಸಿಕೊಂಡು ಬೇರೆ ಸ್ಥಳಕ್ಕೆ ವರ್ಗಾಯಿಸಿ ವಸತಿ ನೀಡಲಾಗಿದೆ. ಪುನರ್ ನಿರ್ಮಾಣದ ಗ್ರಾಮಕ್ಕೆ ವಸತಿ ಬಿಟ್ಟರೆ ಬೇರೆ ಸೌಲಭ್ಯಗಳೂ ನೀಡಿಲ್ಲ. ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಚಿತ್ತ ಹರಿಸಲಿ.| ಉಮಾಕಾಂತ ಮಾನಕಾರಶ್ರೀ ಶರಣಬಸವೇಶ್ವರ ಪಂಚ ಕಮಿಟಿ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net