

ಕೊಡೇಕಲ್ : ವರ್ಷದಲ್ಲಿ ಎರಡು ಬಾರಿ ಜಾತ್ರೆ, ಶಿವರಾತ್ರಿಯಂದು ಕಾಲಜ್ಞಾನಿಯ ನುಡಿ ಪಠಣ, ಯುಗಾದಿಗೆ ಗಂಧಲೇಪನ ಹೀಗೆ ವರ್ಷವಿಡೀ ವಿವಿಧ ಧಾರ್ಮಿಕ ಕಾರ್ಯಗಳ ಮೂಲಕ ಅಸಂಖ್ಯಾತ ಭಕ್ತರ ತಾಣವಾದ ಕೊಡೇಕಲ್ ಬಸವೇಶ್ವರ ದೇವಸ್ಥಾನದಲ್ಲಿ ಸೂಕ್ತ ಸೌಲಭ್ಯವಿಲ್ಲದೆ ಭಕ್ತರು ಸಂಕಷ್ಟ ಅನುಭವಿಸುವಂತಾಗಿದೆ.
ಕಾಲಜ್ಞಾನ ವಚನಗಳನ್ನು ಬರೆಯುವ ಮೂಲಕ ಭವಿಷ್ಯದಲ್ಲಾಗುವ ಘಟನೆಗಳನ್ನು ವರ್ತಮಾನದಲ್ಲಿ ಹೇಳಿ ನಾಡಿನಾದ್ಯಂತ ಖ್ಯಾತಿ ಪಡೆದ ಹುಣಸಗಿ ತಾಲೂಕಿನ ಕೊಡೇಕಲ್ ಬಸವೇಶ್ವರ ದೇವಸ್ಥಾನ ಸಂಪೂರ್ಣ ನಿರ್ಲಕ್ಷಕ್ಕೊಳಪಟ್ಟಿದೆ. ೧೫ನೇ ಶತಮಾನದಲ್ಲಿ ಕೊಡೇಕಲ್ ಗ್ರಾಮದಲ್ಲಿ ನೆಲೆಸಿ ಇಲ್ಲಿಯೇ ಐಕ್ಯರಾದ ಶ್ರೀ ಬಸವೇಶ್ವರರು ಈ ಭಾಗದ ಜನರ ಮನೆ ದೇವರಾಗಿದ್ದಾರೆ.
ಬಸವಣ್ಣನವರ ಐಕ್ಯ ಸ್ಥಾನ ಊರೊಳಗೆ ಮತ್ತು ಕಾಲಜ್ಞಾನ ವಚನಗಳನ್ನು ಬರೆದ ಪ್ಯಾಟಿ ವಲಯದಲ್ಲಿ ಇಂಡೊ ಇಸ್ಲಾಮಿಕ್ ಶೈಲಿಯ ದೇವಸ್ಥಾನಗಳಿದ್ದು, ಎಲ್ಲ ವರ್ಗದ ಭಕ್ತರನ್ನು ಹೊಂದಿರುವುದು ಇಲ್ಲಿನ ವಿಶೇಷ. ವಿಶಿಷ್ಟ ಸಂಪ್ರದಾಯ ಹೊಂದಿರುವ ಈ ದೇವಸ್ಥಾನಕ್ಕೆ ಧಾರ್ಮಿಕ ದತ್ತಿ ಇಲಾಖೆ ಸಮರ್ಪಕ ಸೌಕರ್ಯ ಕಲ್ಪಿಸದಿರುವುದು ವಿವಿಧ ಜಿಲ್ಲೆಗಳ ಭಕ್ತರು ಸಮಸ್ಯೆ ಎದುರಿಸುವಂತಾಗಿದೆ.
ವಿಪರ್ಯಾಸ ಎಂದರೆ ಈ ದೇವಸ್ಥಾನಕ್ಕೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದು, ತಹಸೀಲ್ದಾರ್ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ. ಆದರೂ ದೇವಸ್ಥಾನ ಅಭಿವೃದ್ಧಿಯಿಂದ ಬಹಳ ದೂರ ಉಳಿದಿದೆ.
ಪ್ರತಿ ವರ್ಷ ನಡೆಯವ ಎರಡು ಜಾತ್ರೆ, ಹರಾಜು, ಮಹಾ ಶಿವರಾತ್ರಿ, ಯುಗಾದಿ ಮತ್ತು ಶ್ರಾವಣ ಮಾಸದಲ್ಲಿ ನಡೆಯುವ ವಿಶೇಷ ಪೂಜೆ ಸೇರಿ ಹರಕೆ ತೀರಿಸಲು ಬರುವ ಭಕ್ತರು ನೀಡುವ ದೇಣಿಗೆ ಲಕ್ಷಗಟ್ಟಲೆ ಹಣ ಹುಂಡಿ ಪೆಟ್ಟಿಗೆಗೆ ಸೇರುತ್ತಿದೆ. ಆದರೆ ಹುಂಡಿ ಹಣ ಎಣಿಸಿ ಬ್ಯಾಂಕ್ ಖಾತೆಗೆ ಜಮೆ ಮಾಡುವ ಅಧಿಕಾರಿಗಳು ದೇವಸ್ಥಾನದ ಅಭಿವೃದ್ಧಿಗೆ ಯಾಕೆ ಮೌನ ತಾಳಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ.
೧೦ ವರ್ಷದ ಹಿಂದೆ ಆರಂಭಗೊAಡ ಯಾತ್ರಿ ನಿವಾಸ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಈ ಬಗ್ಗೆ ಇಲಾಖೆ ಮೌನ ವಹಿಸಿದೆ. ಭಕ್ತರಿಗೆ ಅನುಕೂಲವಾಗಬೇಕಿದ್ದ ಕಟ್ಟಡ ಇಂದು ಹಾಳಾಗುತ್ತಿದೆ. ಕಳೆದ ಜು. ೨೬ರಂದು ಹುಂಡಿ ಮುರಿದು ಹಣ ಕಳ್ಳತನವಾಗಿ ಎರಡು ವಾರ ಕಳೆಯುತ್ತಾ ಬಂದರೂ ಹೊಸ ಹುಂಡಿಪೆಟ್ಟಿಗೆ ತಂದಿಡುವ ಕಾರ್ಯ ಇನ್ನೂ ಆಗಿಲ್ಲ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸಮರ್ಪಕ ಸೌಲಭ್ಯ ಒದಗಿಸುವಲ್ಲಿ ಇಲಾಖೆ ಮುಂದಾಗಲಿ ಎಂಬುದು ಭಕ್ತರ ಆಗ್ರಹವಾಗಿದೆ.