

ಚಿಕ್ಕಬಳ್ಳಾಪುರ: ಬೀದಿ ವ್ಯಾಪಾರಿಗಳು ಸರ್ಕಾರದ ವಿಶೇಷ ಸವಲತ್ತುಗಳನ್ನು ಸದ್ವಿನಿಯೋಗ ಪಡಿಸಿಕೊಂಡು ಆರ್ಥಿಕಾಭಿವೃದ್ಧಿ ಹೊಂದಬೇಕು ಎಂದು ನಗರಾಭಿವೃದ್ಧಿ ಯೋಜನಾ ನಿರ್ದೇಶಕಿ ಎಂ.ರೇಣುಕಾ ಕರೆ ನೀಡಿದರು.
ನಗರದ ಹೊಸ ಖಾಸಗೀ ಬಸ್ ನಿಲ್ದಾಣದ ಆವರಣದಲ್ಲಿ ಬೀದಿ ವ್ಯಾಪಾರಸ್ಥರ ಸಂಘ ಕೈಗೊಂಡಿದ್ದ ಸದಸ್ಯರಿಗೆ ಮಾಸ್ಕ್, ಸ್ಯಾನಿಟೈಸ್ ವಿತರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಈಗಾಗಲೇ ಜಿಲ್ಲೆಯಲ್ಲಿ ಬೀದಿಬದಿ ವ್ಯಾಪಾರಿಗಳ ಸರ್ವೆ ನಡೆಸಿ, ಗುರುತಿನ ಚೀಟಿಯನ್ನು ವಿತರಿಸಿದ್ದು ವಹಿವಾಟು ಕೈಗೊಳ್ಳಲು ಆರ್ಥಿಕ ನೆರವು, ಅಗತ್ಯ ಪರಿಕರಗಳನ್ನು ಒದಗಿಸಲಾಗುತ್ತಿದೆ. ಇದರ ಸದ್ವಿನಿಯೋಗದಿಂದ ಅಭಿವೃದ್ಧಿ ಹೊಂದಬಹುದು ಎಂದರು. ರಾಜ್ಯ ಮಾವು ಮತ್ತು ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜ್ ಮಾತನಾಡಿ, ಬೀದಿಬದಿ ವ್ಯಾಪಾರಸ್ಥರು ವಹಿವಾಟು ನಡೆಸುವುದರ ಜತೆಗೆ ಆರೋಗ್ಯದ ಕಡೆಗೂ ಹೆಚ್ಚಿನ ಕಾಳಜಿಯನ್ನು ತೋರಬೇಕು ಎಂದು ಸಲಹೆ ನೀಡಿದರು.
ಪೌರಾಯುಕ್ತ ಡಿ.ಲೋಹಿತ್ ಮಾತನಾಡಿ, ನಗರದಲ್ಲಿ 637 ಬೀದಿಬದಿ ವ್ಯಾಪಾರಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ನಗರದಲ್ಲಿ ವ್ಯಾಪಾರಕ್ಕಾಗಿ ಸೂಕ್ತ ಸ್ಥಳಗಳನ್ನು ಗುರುತಿಸಲಾಗುತ್ತಿದೆ. ಒಳ್ಳೆಯ ವಹಿವಾಟಿಗೆ ಸುರಕ್ಷತೆ ಸೇರಿ ಹಲವು ಅನುಕೂಲಗಳನ್ನು ಮಾಡಿಕೊಡಲಾಗುವುದು ಎಂದರು. ಬೀದಿಬದಿ ವ್ಯಾಪಾರಸ್ಥರು ಸುಗಮ ಸಂಚಾರಕ್ಕೆ ಅಡ್ಡಿಯಾಗುವ ಸ್ಥಳಗಳಲ್ಲಿ ಅಂಗಡಿಗಳನ್ನಿಟ್ಟುಕೊಳ್ಳುವುದು ಸರಿಯಲ್ಲ. ಇದರಿಂದ ಜನರು ತೊಂದರೆ ಅನುಭವಿಸಬೇಕಾಗುತ್ತದೆ. ಇದಕ್ಕೆ ಅವಕಾಶ ನೀಡಬಾರದು ಎಂದರು.
ನಗರಸಭಾ ಅಧ್ಯಕ್ಷ ಡಿ.ಎಸ್.ಆನಂದ್ ರೆಡ್ಡಿ ಬಾಬು, ಮಾಜಿ ಅಧ್ಯಕ್ಷೆ ಎಸ್.ಲೀಲಾವತಿ, ಜಿ.ಪಂ.ಸದಸ್ಯ ಪಿ.ಎನ್.ಕೇಶವರೆಡ್ಡಿ, ಮುಖಂಡ ಕೆ.ವಿ.ನವೀನ್ ಕಿರಣ್, ಬೀದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಸ್ಲಾಂ ಪಾಷಾ, ಪದಾಧಿಕಾರಿಗಳಾದ ತರಕಾರಿ ವೆಂಕಟೇಶ್, ಶ್ರೀನಿವಾಸ್ ಮತ್ತಿತರರು ಇದ್ದರು.