ಸೌಲಭ್ಯ ತಲುಪಿಸುವಲ್ಲಿ ನಿರ್ಲಕ್ಷ್ಯ ಸಲ್ಲ

oplus_131074
ಹುಮನಾಬಾದ್ ತಾಪಂ ಸಭಾಂಗಣದಲ್ಲಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಅಧ್ಯಕ್ಷತೆಯಲ್ಲಿ ಶನಿವಾರ ಆಯೋಜಿಸಿದ್ದ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಎಂಎಲ್ಸಿ ಡಾ.ಚಂದ್ರಶೇಖರ ಪಾಟೀಲ್, ದೀಪಿಕಾ ನಾಯ್ಕರ, ಲಕ್ಷ್ಮೀ ಬಿರಾದಾರ, ಅಂಜುಮ ತಬಸ್ಸುಮ್, ಮಂಜುನಾಥ ಪಂಚಾಳ ಇತರರಿದ್ದರು.
Published on

ಹುಮನಾಬಾದ್: ಕ್ಷೇತ್ರದಲ್ಲಿ ವಿವಿಧ ಯೋಜನೆಯಡಿ ಬರುವ ಅನುದಾನದಲ್ಲಿನ ಕಾಮಗಾರಿಗಳನ್ನು ತ್ವರಿತ ಗತಿ ಮುಗಿಸುವುದು ಹಾಗೂ ಸಾರ್ಜನಿಕರಿಗೆ ಸರ್ಕಾರದ ಸೌಲಭ್ಯಗಳು ಒದಗಿಸಿ ಕೊಡುವಲ್ಲಿ ಅಧಿಕಾರಿಗಳು ವಿಳಂಬ ನೀತಿ ಹಾಗೂ ನಿರ್ಲಕ್ಷ್ಯ ವಹಿಸುವುದು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಖಡಕ್ ಎಚ್ಚರಿಕೆ ನೀಡಿದರು.

ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ವಿವಿಧ ಯೋಜನೆಯಡಿ ೨೦೨೫-೨೬ ನೇ ಸಾಲಿನಲ್ಲಿ ಬರುವ ಅನುದಾನದಡಿ, ರಸ್ತೆ, ನೀರು, ಆರೋಗ್ಯ, ಕೃಷಿ, ಶಿಕ್ಷಣ ಸೇರಿ ಆಯಾ ಇಲಾಖೆಯವರು ಆದಷ್ಟು ಬೇಗನೆ ಕ್ರಿಯಾಯೋಜನೆ ಸಿದ್ಧಪಡಿಸಿ ನೀಡಬೇಕು. ಸಾರ್ವಜನಿಕರಿಗೆ ಅಗತ್ಯವಿರುವ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

ಕೃಷಿ ಸಹಾಯಕ ನಿರ್ದೇಶಕರಾದ ಶರಣಬಸವ ಕಲ್ಯಾಣಿ, ಗೌತಮ ಮಾತನಾಡಿ, ಕ್ಷೇತ್ರದಲ್ಲಿ ಜೂನ್‌ನಲ್ಲಿ ವಾಡಿಕೆ ಮಳೆಗಿಂತ ಕಡಿಮೆ ಪ್ರಮಾಣದ ಮಳೆಯಾದರೂ ಸಹ ಮೇ ತಿಂಗಳಲ್ಲಿ ಮಳೆಯಾಗಿದ್ದರಿಂದ ಭೂಮಿಯಲ್ಲಿ ತೇವಾಂಶವಿದ್ದು, ಮುಂಗಾರು ಬಿತ್ತನೆಯ ಬೀಜ ದಾಸ್ತಾನೂ ಮಾಡಿಕೊಳ್ಳಲಾಗಿದ್ದು, ೮೦ರಷ್ಟು ಬೀಜ ವಿತರಣೆಯಾಗಿದ್ದು, ೬೦ರಷ್ಟು ಬಿತ್ತನೆಯಾಗಿದೆ ಎಂದು ಮಾಹಿತಿ ನೀಡಿದರು.

ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ್ ಮಾತನಾಡಿ, ರೈತರಿಗೆ ಅನ್ಯಾಯವಾಗದಂತೆ ಕಾರ್ಯ ನಿರ್ವಹಿಸಿ ಎಂದು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ತೊಂದರೆಯಾಗುತ್ತಿರುವ ಹಾಗೂ ಸ್ವಚ್ಛತೆಗೆ ಗಮನ ಹರಿಸದೆ ಇರುವ ದೂರುಗಳು ಬರುತ್ತಿವೆ. ಇದನ್ನು ಸರಿಪಡಿಸಿ ಉತ್ತಮ ಚಿಕಿತ್ಸೆ ನೀಡಲು ಕ್ರಮಕೈಗೊಳ್ಳಬೇಕು ಹಾಗೂ ಸ್ವಚ್ಛತೆಗೆ ಗಮನ ಹರಿಸಬೇಕೆಂದು ಶಾಸಕರು ತಾಲೂಕು ಆರೋಗ್ಯ ಇಲಾಖೆ ಅಧಿಕಾರಿ ಡಾ.ಶಿವಕುಮಾರ ಸಿದ್ದೇಶ್ವರ ಅವರಿಗೆ ನಿರ್ದೇಶನ ನೀಡಿದರು.

ಚಿಟಗುಪ್ಪ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬೆಡ್ ಮೇಲೆ ಹಾಸಿಗೆ ಇಲ್ಲದೆ ಮಲಗಿಸಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಪ್ರಶ್ನಿಸಿ, ಇದರಲ್ಲಿ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಮುಂದೆ ಈ ರೀತಿ ನಡೆಯಬಾರದು ಎಂದು ಎಚ್ಚರಿಸಿದರು. ಯಾವುದೆ ಕೊರತೆ ಇದ್ದರೆ ಗಮನಕ್ಕೆ ತನ್ನಿ. ಆದರೆ ರೋಗಿಗಳಿಗೆ ತೊಂದರೆಯಾಗದಂತೆ ಮಾನವೀಯತೆಯಿಂದ ಕಾಳಜಿ ವಹಿಸಿ ಎಂದು ಶಾಸಕದ್ವಯರು ತಿಳಿಸಿದರು.

ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಅಫ್ಸರಮಿಯಾ ಮಾತನಾಡಿ, ಮಾಜಿ ಸಚಿವ ರಾಜಶೇಖರ ಪಾಟೀಲï ಶಾಸಕರಾಗಿದ್ದ ಸಾರ್ವರ್ನಿಕರ ಉಪಯೋಗಕ್ಕಾಗಿ ಆಸ್ಪತ್ರೆಗೆ ಹೈಟಕ್ ಆಂಬುಲೆನ್ಸ್ ಮಂಜೂರು ಮಾಡಿಸಿ ತರಲಾಗಿತ್ತು. ಆದರೆ ಇಟ್ಟ ಸ್ಥಳದಲ್ಲಿಯೇ ಹಾಳಾಗುತ್ತಿದೆ ಎಂದು ಸಭೆಯ ಗಮನಕ್ಕೆ ತಂದಾಗ, ಇಲ್ಲಿ ಮೂರು ಆಂಬುಲೆನ್ಸ್​​ ಇದ್ದು, ತುರ್ತು ಪರಿಸ್ಥಿತಿ ಇದ್ದಾಗ ಮಾತ್ರ ಉಪಯೋಗಿಸಲಾಗುತ್ತದೆ ಎಂದು ಸಿಎಂಒ ಡಾ.ನಾಗನಾಥ ಹುಲಸೂರೆ ಉತ್ತರಿಸಿದರು. ಅದನ್ನು ಉಪಯೋಗಿಸಿ ಇನ್ನೂ ಏನಾದರೂ ಕೊರತೆ ಇದ್ದರೆ ಗಮನಕ್ಕೆ ತನ್ನಿ ಎಂದು ಶಾಸಕರು ತಿಳಿಸಿದರು.

ವಿಶೇಷವಾಗಿ ಕೈಗಾರಿಕೆ ಪ್ರದೇಶದಲ್ಲಿನ ರಸಾಯನಿಕ ಕಾರ್ಖಾನೆಗಳಿಂದ ಮತ್ತೆ ಹೊರಹೊಮ್ಮತ್ತಿರುವ ದುರ್ವಾಸನೆ ಹಾಗೂ ಹೊರಬಿಡುತ್ತಿರುವ ವಿಷತ್ಯಾಜದಿಂದ ಜನತೆ ಮತ್ತೆ ತೊಂದರೆ ಅನುಭವಿಸುತ್ತಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆ ತೆಗದುಕೊಂಡು ಈ ಬಗ್ಗೆ ಕಠಿಣ ಕ್ರಮಕ್ಕೆ ಸೂಚಿಸಲಾಯಿತು.

ಶಿಕ್ಷಣ ಸೇರಿ ವಿವಿಧ ಇಲಾಖೆಯ ಪ್ರಗತಿ ಕುರಿತು ಪರಿಶೀಲಿಸಲಾಯಿತು. ತಾಪಂ ಇಒಗಳಾದ ದೀಪಿಕಾ ನಾಯ್ಕರ, ಲಕ್ಷ್ಮೀ ಬಿರಾದಾರ, ತಹಸೀಲ್ದಾರರಾದ ಅಂಜುಮ ತಬಸ್ಸುಮ್, ಮಂಜುನಾಥ ಪಂಚಾಳ, ಗಾದಾ ಹಾಗೂ ಹುಮನಾಬಾದ್, ಚಿಟಗುಪ್ಪ, ಬಸವಕಲ್ಯಾಣ ತಾಲೂಕಿನ ಅನುಷ್ಠಾನ ಅಧಿಕಾರಿಗಳು ಪಾಲ್ಗೊಂಡಿದ್ದರು.

ಕ್ಷೇತ್ರದ ಕೆಲವಡೆ ಸೋಯಾ ಬೀಜ ಕೊರತೆಯಾಗಿರುವ ಬಗ್ಗೆ ರೈತರಿಂದ ಪ್ರತಿದಿನ ಇಂಥ ನೂರಾರು ದೂರು ಬರುತ್ತಿವೆ. ಅಧಿಕಾರಿಗಳು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು.

| ಡಾ.ಸಿದ್ದಲಿಂಗಪ್ಪ ಪಾಟೀಲ್ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net