ಸೌಲಭ್ಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ

5 vikram 3A
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಪತ್ರಿಕಾ ವಿತರಕರಿಗೆ ಸರ್ಕಾರದಿಂದ ಸಿಗಬೇಕಿರುವ ಎಲ್ಲ ಸೌಲಭ್ಯಗಳನ್ನು ತ್ವರಿತವಾಗಿ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದ ರಂಗಾಯಣ ಆವರಣದಲ್ಲಿನ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಧಾರವಾಡ ಪತ್ರಿಕಾ ವಿತರಕರ ಸಂಘ ಹಾಗೂ ಪತ್ರಿಕಾ ವಿತರಕರ ಸಂಘ ಧಾರವಾಡ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾ ವಿತರಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕರ ಹಿತ ಕಾಪಾಡುವುದೇ ನನ್ನ ಮುಖ್ಯ ಉದ್ದೇಶ. ಇದೇ ಕಾರಣಕ್ಕೆ ಮೊದಲ ಬಾರಿಗೆ ಈ ಖಾತೆ ವಹಿಸಿಕೊಂಡ ಸಮಯದಲ್ಲಿ ಕನಿಷ್ಠ ವೇತನವನ್ನು 7 ಸಾವಿರ ರೂ.ದಿಂದ 11 ಸಾವಿರಕ್ಕೆ ಏರಿಸಿದ್ದೆ. ಅದೇ ರೀತಿ ಪತ್ರಿಕೆ ಬಿಡಿ ವರದಿಗಾರರು ಹಾಗೂ ಪತ್ರಿಕಾ ವಿತರಕರಿಗೂ ಕನಿಷ್ಠ ವೇತನ ನಿಗದಿ ಮಾಡುವ ಚಿಂತನೆ ಇದೆ. ಹೀಗಾಗಿ ಬಿಡಿ ವರದಿಗಾರರ ಮಾಹಿತಿ ಗುರುತಿಸಿ ಮಾಹಿತಿ ನೀಡಬೇಕು ಎಂದರು.
ವಿತರಕರ ಬೇಡಿಕೆಗಳ ಬಗ್ಗೆ ಆಲಿಸಿದ್ದೇನೆ. ಕಲ್ಯಾಣ ನಿಧಿ ಸ್ಥಾಪನೆ ಕುರಿತು ಸಹ ಬೇಡಿಕೆ ಇದೆ. ಇದಕ್ಕೆ ಪತ್ರಿಕಾ ಮಾಲೀಕರ ಸಹಕಾರ ಸರ್ಕಾರ ಬೇಕಿದೆ. ಹೀಗಾಗಿ ಸಮಗ್ರ ಚರ್ಚೆ ನಡೆಸಿ ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಕಾರ್ಮಿಕರಿಗೆ ಇಲಾಖೆಯಿಂದ ಸಿಗಬೇಕಿರುವ ಸೌಲಭ್ಯಗಳನ್ನು ತಲುಪಿಸಲು ನನ್ನ ಕೈಲಾದಷ್ಟು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ನಗರದಲ್ಲಿ ಶೆಡ್ ನೀಡಲು ಕೂಡಲೇ ವ್ಯವಸ್ಥೆ ಮಾಡಿಸುವ ಭರವಸೆ ನೀಡಿದರು.
ವಿಜಯವಾಣಿ ಸ್ಥಾನಿಕ ಸಂಪಾದಕ ಪ್ರಕಾಶ ಶೇಟ್ ಮಾತನಾಡಿ, ಮಳೆ, ಬಿಸಿಲು ಎನ್ನದೆ ಹಗಲಿರುಳು ಸೇವೆ ಸಲ್ಲಿಸುತ್ತಿರುವ ಪತ್ರಿಕಾ ವಿತರಕರಿಗೆ ಮುಖ್ಯವಾಗಿ ಆರೋಗ್ಯ ವಿಮೆ ಅಗತ್ಯ. ಈ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇನ್ನು ವಿತರಕರು ತಮ್ಮೊಂದಿಗೆ ಪತ್ರಿಕೆಯನ್ನು ಬೆಳೆಸಿದರೆ ತಾವು ಬೆಳೆಯಲು ಇನ್ನಷ್ಟು ಅನುಕೂಲವಾಗಲಿದೆ ಎಂದರು.
ವಿಜಯವಾಣಿ ವಿತರಕ ಶಶಿಕಾಂತ ನೀಲಾಕರಿ ಮಾತನಾಡಿ, ವರ್ಷದ ಎಲ್ಲ ದಿನವೂ ಕಾರ್ಯ ನಿರ್ವಹಿಸುವ ಪತ್ರಿಕಾ ವಿತರಕರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ಇಲ್ಲ. ಪತ್ರಿಕೆ ಜೋಡಿಸಲು ನಗರದಲ್ಲಿ ನಿರ್ದಿಷ್ಟ ಜಾಗೆಯಲ್ಲಿ ಶೆಡ್ ನಿರ್ಮಾಣ, ಅಸಂಘಟಿತ ಕಾರ್ಮಿಕರು ಎಂದು ಗುರುತಿಸಿ ಎಲ್ಲ ಸೌಲಭ್ಯ ನೀಡಬೇಕಲ್ಲದೆ, ಆಪತ್ ನಿಧಿ ಸ್ಥಾಪಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.
ಹಿರಿಯ ವಿತರಕ ವಿ.ಎಂ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, 15-20 ವರ್ಷಗಳ ಹಿಂದೆ ಪತ್ರಿಕೆ ಹಂಚುವವರ ಸಂಖ್ಯೆ ಕಡಿಮೆ ಇತ್ತು. ಆದರೆ ಇಂದು 100ಕ್ಕೆ ತಲುಪಿದೆ. ವಿವಿಧ ಉದ್ಯಮಗಳು ಉಚ್ಛರಾಯ ಸ್ಥಿತಿಗೆ ತಲುಪಿದ್ದರೂ, ಪತ್ರಿಕೆ ವಿತರಣೆ ಉದ್ಯಮ ಮಾತ್ರ ಇದ್ದಲ್ಲೇ ಇದೆ. ಆದರೆ ಡಾ. ವಿಜಯ ಸಂಕೇಶ್ವರ ಅವರು ಈ ಪತ್ರಿಕಾ ರಂಗಕ್ಕೆ ಕಾಲಿಟ್ಟ ದಿನದಿಂದ ವಿತರಕರಿಗೆ ಹೆಚ್ಚಿನ ಅನುಕೂಲ ಲಭಿಸುವಂತಾಗಿದೆ. ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಸರ್ಕಾರ ನೀಡಬೇಕು ಎಂದರು.
ಇದೇ ಸಂದರ್ಭದಲ್ಲಿ ಸಚಿವ ಸಂತೋಷ ಲಾಡ್ ಅವರಿಗೆ ವಿತರಕರ ವತಿಯಿಂದ ವಿವಿಧ ಬೇಡಿಕೆಗಳ ಕುರಿತು ಮನವಿಪತ್ರ ಸಲ್ಲಿಸಲಾಯಿತು.ಸುರೇಶ ಸುಣಗಾರ, ಪತ್ರಿಕಾ ವಿತರಕರು, ಇತರರು ಇದ್ದರು. ವಿಜಯವಾಣಿ ಹಿರಿಯ ವರದಿಗಾರ ಮಂಜುನಾಥ ಅಂಗಡಿ ಸ್ವಾಗತಿಸಿ, ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net