ಸೌಲಭ್ಯ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ:ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಹೇಳಿಕೆ

16CBP4
Published on

ಚಿಕ್ಕಬಳ್ಳಾಪುರ: ಶಿಕ್ಷಣ, ಆರೋಗ್ಯ, ವಸತಿ, ಸಾರಿಗೆ ಸೇರಿದಂತೆ ಬಹುತೇಕ ಕ್ಷೇತ್ರಗಳು ಖಾಸಗೀಕರಣಗೊಂಡು, ಸರ್ಕಾರವು ಜನಪರ ಜವಾಬ್ದಾರಿಯಿಂದ ಹಂತ ಹಂತವಾಗಿ ದೂರ ಸರಿಯುತ್ತಿರುವುದು ದುರದೃಷ್ಟಕರ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ವಿಷಾದಿಸಿದರು.

ನಗರದ ಜಚನಿ ವಿದ್ಯಾಸಂಸ್ಥೆಯಲ್ಲಿ ಕಾಂತಿ ಸೇವಾ ಟ್ರಸ್ಟ್ ಮತ್ತು ಲಕ್ಷ್ಮಮ್ಮ ಸೇವಾ ಟ್ರಸ್ಟ್, ಜಚನಿ ವಿದ್ಯಾಸಂಸ್ಥೆ ಬುಧವಾರ ಆಯೋಜಿಸಿದ್ದ ಭಾರತದ ಸಂವಿಧಾನ ಸಂರಕ್ಷಣೆ ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಖಾಸಗಿ ಮತ್ತು ಸಾರ್ವಜನಿಕ ಕ್ಷೇತ್ರವನ್ನೊಳಗೊಂಡಂತೆ ಭಾರತವು ಮಿಶ್ರ ಆರ್ಥಿಕ ವ್ಯವಸ್ಥೆಯನ್ನು ಹೊಂದಿದೆ. ಆದರೆ, ಜಾಗತೀಕರಣದ ಪ್ರಭಾವದಿಂದ ಶಿಕ್ಷಣ, ಆರೋಗ್ಯ, ವಸತಿ, ಸಾರಿಗೆ ಸೇರಿ ಎಲ್ಲವೂ ಖಾಸಗೀಕರಣಗೊಳ್ಳುತ್ತಿದೆ ಎಂದರು.

\ಜನರಿಗೆ ಮೂಲ ಸೌಲಭ್ಯ ಕಲ್ಪಿಸುವುದು ಸರ್ಕಾರದ ಮಹತ್ತರವಾದ ಜವಾಬ್ದಾರಿ. ಆದರೆ, ಇದರಿಂದ ದೂರ ಸರಿಯುತ್ತಿದೆ. ಇದನ್ನು ಜನರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಬಟ್ಟೆ, ಭಾಷೆೆ, ಆಹಾರ, ತಿಲಕದ ವಿಚಾರದಲ್ಲಿ ಸಿಟ್ಟು ಮಾಡಿಕೊಡುವ ಧೋರಣೆಯು ದೂರವಾಗಬೇಕು. ಪರಸ್ಪರ ಪ್ರೀತಿ ಗೌರವದಿಂದ ಜೀವನ ಸಾಗಿಸಬೇಕು ಎಂದರು.ಭಾರತ ಸಂವಿಧಾನ ಜಾರಿಯಾಗಿ 73 ವರ್ಷ ಕಳೆದರೂ ಬಹುಪಾಲು ಜನರು ಮಹತ್ವವನ್ನು ಅರಿತಿಲ್ಲ. ಇದರ ಅರ್ಥಪೂರ್ಣ ಅಧ್ಯಯನಕ್ಕೆ ಆಸಕ್ತಿ ಬೆಳೆಸಬೇಕಾಗಿದೆ ಎಂದರು.

ಹಿಂದು, ಮುಸ್ಲಿಂ, ಜೈನ, ಬೌದ್ಧ ಕ್ರೈಸ್ತ ಹಾಗೂ ಬುಡಕಟ್ಟು ಜನಾಂಗಗಳು ಭಾರತದಲ್ಲಿವೆ. ಬೇರೆ ಬೇರೆ ದೇಶಗಳಿಂದ ಬಂದ ಜನ ಬೇರೆಯಾಗಿಯೇ ಉಳಿಯದೇ ಒಂದಾದರು. ಇದರಿಂದಲೂ 4 ಸಾವಿರಕ್ಕೂ ಹೆಚ್ಚು ಜಾತಿಗಳನ್ನು ದೇಶದಲ್ಲಿ ಕಾಣಲಾಗುತ್ತಿದೆ ಎಂದು ಹೇಳಿದರು.ಜಚನಿ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಶಿವಜ್ಯೋತಿ, ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ.ಕೋಡಿರಂಗಪ್ಪ, ವಕೀಲ ಆರ್.ಮಟಮಪ್ಪ, ಜೀತ ವಿಮುಕ್ತ ಕರ್ನಾಟಕ ರಾಜ್ಯ ಸಂಚಾಲಕ ಕಿರಣ್ ಕಮಲ ಪ್ರಸಾದ್, ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಚಲಪತಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹರೀಶ್, ಗ.ನ.ಅಶ್ವತ್ಥ್, ಎನ್.ಗಂಗಾಧರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net