ಸೌಲಭ್ಯ ಕಲ್ಪಿಸದಿದ್ದರೆ ಕಠಿಣ ಕ್ರಮ

8Manju4
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದ ಮತಗಟ್ಟೆ ಕೇಂದ್ರವನ್ನು ಡಿಸಿ ನಿತೇಶ ಪಾಟೀಲ, ಎಸ್‌ಪಿ ಡಾ.ಸಂಜೀವ ಪಾಟೀಲ ಪರಿಶೀಲಿಸಿದರು.
Published on

ಬೆಳಗಾವಿ: ಮತಗಟ್ಟೆಗಳಿಗೆ ವಿದ್ಯುತ್, ಕುಡಿಯುವ ನೀರು, ಶೌಚಗೃಹ ಸೇರಿ ಎಲ್ಲ ಸೌಕರ್ಯ ಕಡ್ಡಾಯವಾಗಿ ಒದಗಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷೃ ಮಾಡಿದರೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಎಚ್ಚರಿಸಿದರು.

ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಯರಗಟ್ಟಿ, ಕೌಜಲಗಿ, ಮೂಡಲಗಿ, ಘಟಪ್ರಭಾ, ಶಿಂಧಿಕುರಬೇಟ, ಗೋಕಾಕ, ಬೆಲ್ಲದ ಬಾಗೇವಾಡಿ, ಉಳ್ಳಾಗಡ್ಡಿ-ಖಾನಾಪುರ ಮತ್ತಿತರ ಮತಗಟ್ಟೆಗಳಿಗೆ ಭೇಟಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಪ್ರತಿಯೊಂದು ಮತಗಟ್ಟೆಗಳಲ್ಲಿ ಕನಿಷ್ಠ ಮೂಲ ಸೌಕರ್ಯ ಒದಗಿಸಬೇಕು ಎಂದರು.

ಮತಗಟ್ಟೆಗಳಲ್ಲಿ ಗಾಳಿ, ಬೆಳಕು ಸಮರ್ಪಕವಾಗಿರುವಂತೆ ನೋಡಿಕೊಳ್ಳಬೇಕು. ಕುಡಿಯುವ ನೀರು, ಶೌಚಗೃಹ ಮತ್ತಿತರ ವ್ಯವಸ್ಥೆ ಕಲ್ಪಿಸಬೇಕು. ಅಂಗವಿಕಲ ಮತದಾರರಿಗೆ ಅನುಕೂಲವಾಗುವಂತೆ ರ‌್ಯಾಂಪ್, ಗಾಲಿ ಕುರ್ಚಿ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಮತಗಟ್ಟೆಗಳ ದುರಸ್ತಿ ಈಗಿನಿಂದಲೇ ಆರಂಭಿಸಬೇಕು ಎಂದು ಸೂಚಿಸಿದರು. ಈಗಾಗಲೇ ವಿವಿಧ ಯೋಜನೆಗಳಡಿ ಸರ್ಕಾರಿ ಶಾಲಾ ಕೊಠಡಿ ನಿರ್ಮಿಸಲಾಗಿದೆ. ಅದರಲ್ಲಿ ವಿದ್ಯುತ್ ಸೌಕರ್ಯ ಒಳಗೊಂಡಿರುವ ಎಲ್ಲ ಕೊಠಡಿಗಳನ್ನು ಮತಗಟ್ಟೆಗಳನ್ನಾಗಿ ಮಾಡಲಾಗುತ್ತಿದೆ. ಹಾಗಾಗಿ, ಮತಗಟ್ಟೆಗೆ ಏನೇನು ಸೌಲಭ್ಯ ಬೇಕು ಎಂಬ ಕುರಿತು ಪರಿಶೀಲಿಸಬೇಕು. ಅಲ್ಲದೆ, ಅವಶ್ಯವಿರುವ ಎಲ್ಲ ಕೆಲಸಗಳನ್ನು ನಿಗದಿತ ಸಮಯದಲ್ಲೇ ಪೂರ್ಣಗೊಳಿಸಬೇಕು. ಚುನಾವಣೆ ಘೋಷಣೆಯಾದ ಬಳಿಕ ಮತಗಟ್ಟೆಗಳ ದುರಸ್ತಿ ಮಾಡಲು ಮುಂದಾಗಬೇಡಿ ಎಂದು ಸೂಚಿಸಿದರು.

ಎಸ್‌ಪಿ ಡಾ.ಸಂಜೀವ ಪಾಟೀಲ ಮಾತನಾಡಿ, ಮತಗಟ್ಟೆಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಅಲ್ಲದೆ, ಮತಗಟ್ಟೆಗಳಿಗೆ ಭದ್ರತೆ ಕಲ್ಪಿಸುವ ಕುರಿತು ಸ್ಥಳೀಯ ಮಟ್ಟದ ಪೊಲೀಸರು ಪರಿಶೀಲಿಸಿ ಮಾಹಿತಿ ನೀಡಬೇಕು. ಅಲ್ಲದೆ, ಮತಗಟ್ಟೆಗಳಿಗೆ ಭದ್ರತೆಗೆ ಅವಶ್ಯವಿರುವ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ತಿಳಿಸಿದರು. ತಾಲೂಕು ತಹಸೀಲ್ದಾರ್‌ಗಳು, ಪೊಲೀಸ್ ಅಧಿಕಾರಿಗಳು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net