ಸೌಜನ್ಯಾ ಪ್ರಕರಣ ಮರುತ ನಿಖೆಗೆ ಒತ್ತಾಯಿಸಿ ಪಾದಯಾತ್ರೆ

ಸೌಜನ್ಯಾ ಪ್ರಕರಣ ಮರುತ ನಿಖೆಗೆ ಒತ್ತಾಯಿಸಿ ಪಾದಯಾತ್ರೆ
Published on

   ಹಾಸನ: ಸೌಜನ್ಯಾ ಪ್ರಕರಣವನ್ನು ಮರುತನಿಖೆಗೆ ಒಳಪಡಿಸಿ ಎಂದು ಒತ್ತಾಯಿಸಿ ಕೆಆರ್‌ಆಸ್ ಪಕ್ಷದ ವತಿಯಿಂದ ಬೆಳ್ತಂಗಡಿಯಿಂದ ಬೆಂಗಳೂರು ಫ್ರೀಡಂ ಪಾರ್ಕ್‌ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಉಮೇಶ್ ಬೆಳಗುಂಬ ತಿಳಿಸಿದರು.

ಅತ್ಯಾಚಾರಕ್ಕೆ ಒಳಗಾಗಿ ದಾರುಣವಾಗಿ ಕೊಲೆಯಾದ ಸೌಜನ್ಯಾ ದುರಂತ ಸಾವಿನ ಪ್ರಕರಣದಲ್ಲಿ ಇದುವರೆಗೂ ಯಾರಿಗೂ ಶಿಕ್ಷೆಯಾಗಿಲ್ಲ. ಆರೋಪಿ ಎಂದು ಹೇಳಿ ಬಂಧಿಸಲ್ಪಟ್ಟಿದ್ದ ಸಂತೋಷ್ ರಾವ್ ಎನ್ನುವ ವ್ಯಕ್ತಿ ನಿರಾಪರಾಧಿ ಎಂದು ಹೇಳಿ ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸೌಜನ್ಯಾ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಆ.26 ರಂದು ಬೆಳ್ತಂಗಡಿಯಿಂದ ಬೆಂಗಳೂರು ಫ್ರೀಡಂ ಪಾರ್ಕ್‌ವರೆಗೂ ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೌಜನ್ಯಾ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ತಕ್ಷಣವೇ ಮರುತನಿಖೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ವಿಶೇಷ ಪೊಲೀಸ್ ತನಿಖಾ ತಂಡ ರಚಿಸಬೇಕು ಹಾಗೂ ಈಗಾಗಲೆ ತನಿಖೆ ಮಾಡಿರುವ ತನಿಖಾಧಿಕಾರಿಗಳನ್ನು ತನಿಖೆಗೆ ಒಳಪಡಿಸಬೇಕು ಎಂಬುದು ಸರಕಾರಕ್ಕೆ ನಮ್ಮ ಒತ್ತಾಯ ಸಲ್ಲಿಸಲು ಈ ಪಾದಯಾತ್ರೆ ನಡೆಸಲಾಗುತ್ತಿದೆ ಎಂದರು.

ಮಕ್ಕಳು ಮತ್ತು ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ, ಕೊಲೆ ಪ್ರಕರಣಗಳು ನಿಲ್ಲಬೇಕು. ಈ ಉದ್ದೇಶದಿಂದ ಸೌಜನ್ಯಾ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ನೀಡುವ ನಿಟ್ಟಿನಲ್ಲಿ ನಮ್ಮ ಹೋರಾಟವನ್ನು ಕೈಗೊಳ್ಳಲಾಗಿದೆ. ನಮ್ಮ ಹೋರಾಟಕ್ಕೆ ರೈತ ಸಂಘಟನೆಗಳು ಸೇರಿದಂತೆ ಇತರೆ ಸಂಘಟನೆಗಳು ಕೈಜೋಡಿಸಿವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೆಆರ್‌ಎಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ನಾಗರಾಜು, ಸಂಘಟನಾ ಕಾರ್ಯದರ್ಶಿ ಶಿವಕುಮಾರ್, ಪಾಂಡು ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net