ಸೌಜನ್ಯ ಪ್ರಕರಣ ಮರು ತನಿಖೆಗೆ ಪಟ್ಟು

CTD 25 Manavi--08
Published on

ಚಿತ್ರದುರ್ಗ: ಧರ್ಮಸ್ಥಳದಲ್ಲಿ ದೌರ್ಜನ್ಯಕ್ಕೆ ಒಳಗಾಗಿ ಸಾವಿಗೀಡಾದ ಸೌಜನ್ಯಾ ಪ್ರಕರಣ ಮರು ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಜಿಲ್ಲಾಡಳಿತದ ಮೂಲಕ ಶುಕ್ರವಾರ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಿದರು.
ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಚಿತ್ರದುರ್ಗ, ಭಟ್ಕಳ ಸೇರಿ ಇತರೆಡೆ ದಲಿತ ವಿದ್ಯಾರ್ಥಿನಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ, ಮಣಿಪುರದಲ್ಲಿ ಅಮಾನವೀಯ ಕೃತ್ಯಕ್ಕೆ ಕಾರಣರಾದ ಕಿಡಿಗೇಡಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ಸೇರಿ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ತಡೆಯಲು ದೇಶಾದ್ಯಂತ ಕಣ್ಗಾವಲು ಪಡೆ ರಚಿಸಬೇಕು. ಮಧ್ಯಪ್ರದೇಶದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಧ್ವಂಸಗೊಳಿಸಿದ ದುಷ್ಕರ್ಮಿಗಳನ್ನು ಭಾರತದಿಂದಲೇ ಗಡಿಪಾರು ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಕವಾಡಿಗರಹಟ್ಟಿ ಪ್ರಕರಣ ಸಿಬಿಐಗೆ ವಹಿಸಬೇಕು. ಮೃತ ಕುಟುಂಬಕ್ಕೆ ತಲಾ 50 ಲಕ್ಷ ರೂ. ಪರಿಹಾರ ನೀಡಬೇಕು. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಸಂಬಂಧ ಭೂ ಸ್ವಾಧೀನ ಪ್ರಕ್ರಿಯೆ ನಡೆಯಲಿದೆ. ಆದ್ದರಿಂದ ಮನೆ, ನಿವೇಶನ ಸಂಬಂಧ ಸೂಕ್ತ ದಾಖಲೆ ಇಲ್ಲದ ಹಟ್ಟಿಯ ಜನರಿಗೆ ಹಕ್ಕು ಪತ್ರ ತ್ವರಿತವಾಗಿ ವಿತರಿಸಬೇಕು. ಅಸ್ವಸ್ಥಗೊಂಡ ಪ್ರತಿ ಕುಟುಂಬಕ್ಕೂ ಸಮಾಜ ಕಲ್ಯಾಣ ಇಲಾಖೆಯಿಂದ ಸೌಲಭ್ಯ ನೀಡಬೇಕು ಎಂದು ಕೋರಿದರು.
ಸೇನೆಯ ರಾಜ್ಯ ಕಾರ್ಯದರ್ಶಿ ಕೆ.ರಾಮಚಂದ್ರಪ್ಪ, ಯುವ ಘಟಕದ ಜಿಲ್ಲಾಧ್ಯಕ್ಷ ರೇವಣಸಿದ್ದಪ್ಪ ಬಿ. ಕಲ್ಕುಂಟೆ, ತಾಲೂಕಾಧ್ಯಕ್ಷ ಎನ್.ಎಚ್. ಗೌತಮ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net